ಮುದ್ದಣ್ಣನಿಂದ ಕಾರಂತರ ವರೆಗಿನ ಹಿರಿಯ ಸಾಹಿತ್ಯಕರ ಸಾಧನೆ ಕುರಿತು ಡಾ.ಶ್ರೀನಿವಾಸ ಹಾವನೂರ ಅವರು ರಚಿಸಿರುವ ಕೃತಿ ದಕ್ಷಿಣ ‘ಕನ್ನಡದ ಸಾರಸ್ವತ ಪರಂಪರೆ’. ಈ ಕೃತಿಗೆ ಪಾದೇಕಲ್ಲು ವಿಷ್ಣುಭಟ್ಟ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಡಾ. ಹಾವನೂರರು ಬಹು ವಿಚಿತ್ರವಾದ ಮಾಹಿತಿಕೋಶವೆಂದರೆ ತಪ್ಪಾಗದು. ಎಲ್ಲೆಲ್ಲಿಂದಲೋ ಹೇಗೋ ಅವರು ಮಾಹಿತಿಗಳನ್ನು ಕಲೆಹಾಕುತ್ತಾರೆ. ಅವುಗಳನ್ನು ಬೇಕಾದಲ್ಲಿ ಜೋಡಿಸುತ್ತಾರೆ. ಅವುಗಳಿಗೆ ರೂಪಕೊಟ್ಟು ಅಮೂಲ್ಯ ವಿಷಯಗಳಾಗಿ ಪರಿವರ್ತಿಸುತ್ತಾರೆ. ಅವರು ಬರೆದಾಗ ಚಿಕ್ಕಪುಟ್ಟ ವಿವರಗಳೂ ನಮಗೆ ಮಹತ್ವಪೂರ್ಣವಾಗಿ ಕಾಣಿಸುತ್ತವೆ. ಬರೆದು ಹರಿದೆಸೆವ ಕಾಗದಗಳ ಚೂರುಗಳಲ್ಲಿಯೂ ಡಾ.ಹಾವನೂರರಿಗೆ ಮುಖ್ಯ ವಿಷಯಗಳು ಕಾಣಿಸುತ್ತವೆ. ಅಮಂತ್ರಮಕ್ಷರಂ ನಾಸ್ತಿ ಎಂದು ತೊಡಗುವ ಸುಭಾಷಿತದಲ್ಲಿ. ನಿಷ್ಪ್ರಯೋಜಕಗಳೆಂದು ಭಾವಿಸಲಾಗುವ ವಸ್ತುಗಳನ್ನು ಜೋಡಿಸಿ ಅವುಗಳಿಗೆ ಬೆಲೆ ತರುವ ಯೋಜಕನು ಮಾತ್ರ ದುರ್ಲಭ ಎಂದು ಹೇಳಿದೆ. ಡಾ. ಹಾವನೂರರು ಆ ದುರ್ಲಭವೆಂಬ ಯೋಜಕರೊಳಗೊಬ್ಬರು ಎಂದಿದ್ದಾರೆ ಪಾದೇಕಲ್ಲು ವಿಷ್ಣುಭಟ್ಟ. ಜೊತೆಗೆ ದಕ್ಷಿಣ ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಕ್ರಿ.ಶ. 19ನೇ ಶತಮಾನದ ಕೊನೆ ಹಾಗೂ 20ನೆಯ ಶತಮಾನದಲ್ಲಿ ಮುಖ್ಯವ್ಯಕ್ತಿಗಳೆಂದು ವಿವಿಧ ಕಾರಣಗಳಿಂದ ಪರಿಗಣಿತರಾದ ಮುದ್ದಣ್ಣ, ಹಟ್ಟಿಯಂಗಡಿ ನಾರಾಯಣರಾಯರು, ಪೇಜಾವರ ಸದಾಶಿವರಾಯರು, ಎಮ್. ಗೋವಿಂದ ಪೈಗಳು, ಶಿವರಾಮ ಕಾರಂತರು- ಈ ಐವರ ಬಗೆಗೆ ಈಗಾಗಲೇ ಸಾಕಷ್ಟು ಎನ್ನುವಂತೆ ಬರವಣಿಗೆಗಳು ಬಂದಿವೆ. ಆದರೆ ಡಾ. ಹಾವನೂರರು ಬರೆದ ಈ ಲೇಖನಗಳಲ್ಲಿ ಮತ್ತೂ ಹೊಸ ವಿಷಯಗಳಿವೆ, ಹೊಸ ನೋಟಗಳು, ಹೊಳಹುಗಳು ಇವೆ. ಈ ಲೇಖಕರ ವೈಯಕ್ತಿಕ ಜೀವನದ ವಿವರಗಳು ಅವರನ್ನು ನಾವು ಇನ್ನಷ್ಟು ನೆನೆಯುವಂತೆ ಮಾಡಿವೆ. ಲೇಖಕರ ಜೀವನ ವಿವರಗಳು ಕವಿಚರಿತ್ರೆಯ ಒಂದು ಭಾಗವೇ ಸರಿ. ಲೇಖಕರನ್ನು ಗೌರವಿಸುವ ಓದುಗರ ಸಮುದಾಯದಲ್ಲಿ ಆ ಲೇಖಕರ ಜೀವನದ ಬಗೆಗೆ ಕುತೂಹಲವಿರುವುದು ಸಹಜ. ಹಾವನೂರರ ಬರಹಗಳು ಆ ವಿವರಗಳನ್ನು ಎಲ್ಲಿಯೂ ಇತಿಹಾಸಕ್ಕೆ ಅಪಚಾರ ಒದಗದಂತೆ ನಿರೂಪಿಸುತ್ತವೆ. ತಪ್ಪಾದ ಮಾಹಿತಿಗಳನ್ನು ಸರಿಪಡಿಸುತ್ತವೆ ಎಂದಿದ್ದಾರೆ.
©2024 Book Brahma Private Limited.