‘ಕಂಬಾರರಿಗೆ ಜ್ಞಾನಪೀಠ ಅಭಿನಂದನೆ’ ಕೃತಿಯು ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಡಾ. ಚಂದ್ರಶೇಖರ ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ಮೇಲೆ ಬಂದಂತಹ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿ 13 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಮಾಹಿತಿ ಅಡಕವಾಗಿದ್ದು, 87 ಕನ್ನಡ ಶೀರ್ಷಿಕೆಗಳು ಹಾಗೂ 18 ಇಂಗ್ಲೀಷ್ ಲೇಖನ, 14 ಕವನಗಳು, 10 ಸಂದರ್ಶನಗಳು, 8 ಸಂಪಾದಕೀಯ ಬರಹಗಳನ್ನು ಒಳಗೊಂಡಿದೆ. ಕೃತಿಯ ಬೆನ್ನುಡಿಯಲ್ಲಿ ಅಂಬಳಿಕೆ ಹಿರಿಯಣ್ಣ ಅವರು, ಕವಿ ಕಂಬಾರರು ಈ ನಾಡು ಕಂಡ ದೇಸಿ ಸತ್ವಶಾಲಿ ಪ್ರತಿಭೆ. ಪ್ರದೇಶ ಪ್ರಜ್ಞೆ, ಕಾಲ ಪ್ರಜ್ಞೆ ಹಾಗೂ ಸಮುದಾಯ ಪ್ರಜ್ಞೆಯಿಂದ ಬರೆಯುವವರು, ಕನ್ನಡದ ಪರಂಪರಾಗತ ಜ್ಞಾನವನ್ನು ಕ್ರಿಯಾಶೀಲಗೊಳಿಸಿದ ಧೀಮಂತ ಸಾಹಿತಿ. ಕಂಬಾರರ ಅಭಿವ್ಯಕ್ತಿಯ ಮೂಲ ಜೀವಾಳವೇ ಜಾನಪದ, ಅವರ ಒಟ್ಟು ಸಾಹಿತ್ಯ ಜಾನಪದದ ಕುಲುಮೆಯಿಂದಲೇ ಪಡಿಮೂಡಿದೆ. ದೇಸಿತನದ ಗಂಧ-ಗಾಳಿಯನ್ನು ಕನ್ನಡದ ಮೂಲಕ ಜಗತ್ತಿನ ವಿಸ್ತಾರ ನೆಲೆಗೆ ಪಸರಿಸಿರುವ ಅವರು, ಜಾನಪದದಲ್ಲಿ ಹುದುಗಿರುವ ವಿಫುಲ ಸಾಹಿತ್ಯ ಸೃಷ್ಠಿಯ ಸಾಧ್ಯತೆಗಳನ್ನು ಸಾಧ್ಯವಾಗಿಸಿದ ಮಹಾಸಾಧಕರು. ಹೆಮ್ಮೆಯ ಜ್ಞಾನಪೀಠ ಗೌರವಕ್ಕೆ ಪಾತ್ರರಾದ ಕಂಬಾರ ಅವರದು ಈ ನೆಲದ ಸತ್ವ ಮತ್ತು ಸಾತ್ವಿಕತೆಯನ್ನು ಸಂಕೇತಿಸುವ ವ್ಯಕ್ತಿತ್ವವಾಗಿದೆ. ಇಂತಹ ಕನ್ನಡದ ಹೆಮ್ಮೆಯ ಕವಿ ಕಂಬಾರರ ಬಹುಮುಖಿ ವ್ಯಕ್ತಿತ್ವದ ಆಯಾಮಗಳನ್ನು ಕಾಣಿಸುವ ಪ್ರಯತ್ನವಾಗಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಜಾನಪದ ಹಾಡುಗಾರರು, ಕ್ರಿಯಾಶೀಲ ಉಪನ್ಯಾಸಕ ಹನುಮಂತಪ್ಪ ಅಂಡಗಿ ಚಿಲವಾಡಗಿ ಈ ಪ್ರಮಾಣದ ಗ್ರಂಥವೊಂದನ್ನು ಸಂಪಾದಿಸಿ ಹೊರತಂದಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.