ಅಧ್ಯಾತ್ಮದಲ್ಲಿ ಭಕ್ತಿಮಾರ್ಗದಿಂದ ಮುಕ್ತಿಯನ್ನು ಸಾಧಿಸುವ ಕುರಿತು ಹಲವಾರು ಸತ್ಪುರುಷರು, ಶರಣರು ಅನುಭಾವಿಗಳು ಹಾಗೂ ಚಿಂತಕರು ತಮ್ಮ ತಮ್ಮ ಅನುಭವಗಳನ್ನು ಲೋಕದೊಂದಿಗೆ ಹಂಚಿಕೊಂಡಿದ್ದಾರೆ. ಶರಣರು ಹೇಳಿದ ಮಾರ್ಗದಲ್ಲಿ ಅವರ ಅನುಯಾಯಿಗಳು ನಡೆದು ತಮ್ಮ ಬದುಕನ್ನು ಹಸನುಗೊಳಿಸಿಕೊಂಡಿದ್ದಾರೆ. ಭಕ್ತಿಯೆಂಬುದು ಮುಕ್ತಿಗೆ ಒಂದು ಮಾರ್ಗವೇ ಹೊರತು ಅದೇ ಗುರಿಯಲ್ಲ ಎಂಬ ತತ್ವವನ್ನು ಸಾರಿದವರು ಕಲಬುರಗಿ ಜಿಲ್ಲೆಯ ಮಾದನ ಹಿಪ್ಪರಗಿ ಗ್ರಾಮದ ಶ್ರೀ ಶಿವಲಿಂಗ ಮಹಾಸ್ವಾಮಿಗಳು. ಅವರು ಭಕ್ತಿಯ ಕುರಿತು ಹಲವಾರು ಅನ್ವೇಷಣೆ, ಪ್ರಯೋಗ ಮಾಡಿದವರು ಹಾಗೂ ಅನುಭವಗಳ ಮೂಲಕ ಅನುಭಾವವನ್ನು ಸಾಧಿಸಿದವರು. ಅವರು ಭಕ್ತಿಯ ಬಗ್ಗೆ ನೀಡಿದ ಉಪನ್ಯಾಸಗಳು, ಭಕ್ತಿಯ ಕುರಿತು ಬರೆದ ಬರಹಗಳು ಬಹಳ ಪ್ರಭಾವಿ ಹಾಗೂ ವಿದ್ವತ್ಪೂರ್ಣವಾಗಿವೆ. ಶ್ರೀಗಳ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಭಕ್ತಿ ಎಂಬ ವಿಷಯನ್ನು ಕೇಂದ್ರವಾಗಿಟ್ಟುಕೊಂಡು ಶ್ರೀಗಳ ಸಾಹಿತ್ಯದ ಜೊತೆ ಜೊತೆಗೆ ನಾಡಿನ ವಿಭಿನ್ನ ಶ್ರೀಗಳು, ಸದ್ಗುರುಗಳು, ಚಿಂತಕರು ಹಾಗೂ ಬರಹಾರರಿಂದ ಭಕ್ತಿಯ ಕುರಿತು ಅವರ ವಿಚಾರ, ಅನುಭವಗಳನ್ನು ಲೇಖನ ಸ್ವರೂಪದಲ್ಲಿ ಬರೆಯಿಸಿ ಇಲ್ಲಿ ಸಂಗ್ರಹಿಸಲಾಗಿದೆ. ಶಿವಲಿಂಗ ಶ್ರೀಗಳು, ಸದ್ಗುರು ಮಹಾನಂದಾತಾಯಿ ಹಿರೇಮಠ, ಕುಮಾರದೇವರು, ಡಾ. ರಹಮತ ತರೀಕೆರೆ, ಡಾ. ಪಿ. ಚಂದ್ರಿಕಾ, ಲಕ್ಷ್ಮೀಶ ತೋಳ್ಪಾಡಿ, ಚಂದ್ರಶೇಖರ ತಾಳ್ಯ ಹೀಗೆ ಘಟಾನುಘಟಿಗಳು ಭಕ್ತಿಯ ಕುರಿತು ಬರೆದ ಅಮೂಲ್ಯ ಲೇಖನಗಳು ಇಲ್ಲಿವೆ. ಶ್ರೀ ಶಿವಲಿಂಗ ಮಹಾಸ್ವಾಮಿಗಳ ಬದುಕು ಹಾಗೂ ಕಾರ್ಯಗಳ ಕುರಿತ ಪರಿಚಯಾತ್ಮಕ ಬರಹವೂ ಇಲ್ಲಿದೆ.
©2024 Book Brahma Private Limited.