ಕಲಬುರಗಿಯ ಶ್ರೀಮತಿ ವಿ.ಜಿ. ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ನಾಗೇಂದ್ರ ಮಸೂತಿ ಅವರ ಜೀವನ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ನುಡಿ ತೋರಣ ಶೀರ್ಷಿಕೆಯಡಿ ದಾಖಲಿಸಿದ ಪ್ರಯತ್ನವಿದು. ಡಾ. ಕಲ್ಯಾಣರಾವ ಜಿ. ಪಾಟೀಲ ಪ್ರಧಾನ ಸಂಪಾದಕರು, ಪ್ರೊ. ಶಿವಶರಣಪ್ಪ ಮೋತಕಪಳ್ಳಿ ಸಂಪಾದಕರು. ಮಸೂತಿ ಅವರು ತಮ್ಮ ಜೀವನದ ಸುವರ್ಣ ಮಹೋತ್ಸವ, ದಾಂಪತ್ಯ ಬದುಕು ಮತ್ತು ಅಧ್ಯಾಪನ ಜೀವನದ ರಜತ ಮಹೋತ್ಸವ ಪೂರೈಸಿದ ಸಂದರ್ಭದಲ್ಲಿ ಅವರ ಬದುಕು ಮತ್ತು ಬರವಣಿಗೆಯನ್ನು ಒಂದು ಕಡೆ ಸೇರಿಸಿ ವ್ಯವಸ್ಥಿತವಾಗಿ ದಾಖಲಿಸುವ ನಿಟ್ಟಿನಲ್ಲಿ ಮತ್ತು ಒಂದು ರೀತಿಯಲ್ಲಿ ಲೇಖಕರ ಆತ್ಮಾವಲೋಕನದ ಪ್ರಯತ್ನವಾಗಿ ಈ ಹೊತ್ತಿಗೆಯು ರೂಪುಗೊಂಡಿದೆ.
ಡಾ. ನಾಗೇಂದ್ರ ಮಸೂತಿಯವರ ನೆನಪಿನ ಬುತ್ತಿ ಹಿಂದಣ ಹೆಜ್ಜೆ ಶೀರ್ಷಿಕೆಯಲ್ಲಿ ಮೂಡಿ ಬಂದಿದೆ. ‘ಸಮಾಲೋಕನ’ ಮೊದಲನೆಯ ಭಾಗದಲ್ಲಿ ಪೂಜ್ಯರು, ಗುರುಗಳು, ಹಿರಿಯ ವಿದ್ವಾಂಸರು, ಪ್ರಾಧ್ಯಾಪಕ ಮಿತ್ರರು, ಸಾಹಿತ್ಯಾಸಕ್ತರು ಡಾ. ನಾಗೇಂದ್ರ ಮಸೂತಿಯವರ ಎಲ್ಲ ಕೃತಿಗಳನ್ನು ಪರಿಶೀಲಿಸಿದ ಲೇಖನಗಳಿವೆ. ಅವಲೋಕನ ಎಂಬ 2ನೇ ಭಾಗದಲ್ಲಿ ಉರಿವ ಕೆಂಡವ ಹೊತ್ತು, ಆಯ್ದ ಹೊಸಗನ್ನಡ ಕವಿತೆಗಳು, ಶಬ್ದಚಿತ್ರ, ಹೊನ್ನ ಕಿರಣ, ಒಡಲ ನುಡಿ, ಮಂಗಲ ತಂಗಾಳಿ, ಮುಗುಳ್ನಗೆಯ ಮಂದಾರ, ಬೂದಿಗರ್ಭದ ಕೆಂಡ, ನೀ ಬೆರೆಸಿದ ಭೇದ, ನುಡಿ ಬೆಳಗು, ಕೆಂಡ ಮಲ್ಲಿಗೆ, ವೈಜ್ಞಾನಿಕ ಲೇಖಣಗಳ ಸಂಗ್ರಹ ಮತ್ತು ಶ್ರೀ ಸಿದ್ಧರಾಮೇಶ್ವರ ಎಂಬ ಕೃತಿಗಳ ಬಗೆಗೆ ಲೇಖಕರು ಬರೆದಿರುವ ಪ್ರಸ್ತಾವನೆ ಮತ್ತು ನಿವೇದನೆಯ ನುಡಿಗಳನ್ನು ಸಂಗ್ರಹಿಸಿದೆ. ಪರಿಶೀಲನೆ ಎಂಬ 3ನೇ ಭಾಗದಲ್ಲಿ ವಚನ ಧಾರೆ, ಬದುಕಿನ ವಚನಗಳು,ಶೂನ್ಯದ ಒಡಲು, ಮೋಡದ ಮೇಲಿನ ಕಣ್ಣು, ಹೃದಯ ಕಂಪನ, ಬಎಳಗಿನೊಳಗಣ ಬೆಳಗು, ಕಲಬುರಗಿ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ ಮುಂತಾದ ಕೃತಿಗಳಿಗೆ ಡಾ. ನಾಗೇಂದ್ರ ಮಸೂತಿಯವರು ಬರೆದಿರುವ ಮುನ್ನುಡಿಗಳನ್ನು ಸಂಕಲಿಸಿದೆ. ಸಹಸ್ಪಂದನ 4ನೇ ಭಾಗದಲ್ಲಿ ಕಲಬುರಗಿ ಪರಿಸರದ ಹಿರಿಯ ಸಾಹಿತಿಗಳು, ಡಾ. ಮಸೂತಿಯವರ ಆಪ್ತ ಸ್ನೇಹಿತರು, ಆತ್ಮೀಯ ಪ್ರಾಧ್ಯಾಪಕರು, ಯುವ ಬರಹಗಾರರು, ಬಂಧುಗಳು, ಹಿತೈಷಿಗಳು ಹಾಗೂ ಶಿಷ್ಯರು ಬರದಿರುವ ಲೇಖನಗಳಿವೆ.
ಕೊನೆಯ ಅನುಬಂಧಗಳಲ್ಲಿ ಪ್ರೊ ಮಸೂತಿಯವರ ವೈಯಕ್ತಿಕ ಬದುಕು ಮತ್ತು ಬರಹಕ್ಕೆ ಸಂಬಂಧಿಸಿದ ಪೂರಕ ಮಾಹಿತಿ, ವೈಯಕ್ತಿಕ ಮತ್ತು ಕೌಟುಂಬಿಕ ವಿವರಗಳಿವೆ. ಕಲಬುರಗಿಯಲ್ಲಿರುವ ಕನ್ನಡ ಪ್ರಾಧ್ಯಾಪಕರೊಬ್ಬರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಸಾಂದರ್ಭಿಕ ನೆನಪಿನ ಹೊತ್ತಿಗೆ ಇದು.
©2024 Book Brahma Private Limited.