ಜಿ.ಎಸ್. ಆಮೂರ ಅವರ ಕನ್ನಡ ವಿಮರ್ಶೆಯ ‘ಸ್ವೀಕೃತಿ’ ಪುಸ್ತಕವನ್ನು ಜಿ.ಎಂ. ಹೆಗಡೆ ಸಂಪಾದಿಸಿದ್ದಾರೆ. ವಿಮರ್ಶಕ ಆಮೂರರು ವಿವಿಧ ಕೃತಿಗ:ಳಿಗೆ ಬರೆದ ಮುನ್ನುಡಿಗಳು, ಬೆನ್ನುಡಿಗಳು, ಒಳ್ನುಡಿಗಳು, ವಿಶೇಷ ಲೇಖನಗಳು, ವಿಮರ್ಶೆಗಳು, ಸಂದರ್ಶನಗಳು ಇತ್ಯಾದಿ ವಿಭಾಗಗಳಡಿ ವಿವಿಧ ಲೇಖಕರು, ಚಿಂತಕರು ಬರೆದ ಲೇಖನಗಳನ್ನು ಸಂಗ್ರಹಿಸಲಾಗಿದೆ. ಡಾ. ಆಮೂರರು ಅವರು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದ ಮಹತ್ವದ ಅಂಶಗಳನ್ನು ಮನದಂಗಳದ ಮಾತುಗಳಲ್ಲಿ ಹೇಳಿದ್ದನ್ನು ಪ್ರಕಟಿಸಿದೆ. ಈ ಕೃತಿಯು ಅಮೂರರ ಸಾಹಿತ್ಯಕ ಸಾಧನೆ, ಜೀವನ ಅನುಭವದ ವಿವಿಧ ಆಯಾಮಗಳನ್ನು ಪರಿಚಯಿಸುತ್ತದೆ. ಸಾಹಿತ್ಯಕ- ವಿಮರ್ಶಾತ್ಮಕ ದೃಷ್ಟಿಯಿಂದ ಅಧ್ಯಯನಯೋಗ್ಯವಾದ ಹೊಳವುಗಳನ್ನು ನೀಡುತ್ತದೆ.
ಆಮೂರ ಅವರಿಗೆ 90 ತುಂಬಿದ ಹಿನ್ನೆಲೆಯಲ್ಲಿ ‘ಸ್ವೀಕೃತಿ’ ಸಂಪಾದಿತಗೊಂಡಿದ್ದು, ಇಲ್ಲಿ ನೂರಕ್ಕೂ ಅಧಿಕ ಲೇಖನಗಳನ್ನು ಸಂಗ್ರಹಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ. ಆಂಗ್ಲ ಸಾಹಿತ್ಯದಲ್ಲೂ ಆಮೂರ ಅವರ ಕೃತಿ-ಲೇಖನಗಳಿದ್ದು, ಅವುಗಳಿಗೂ ದೇಶದುದ್ದಕ್ಕೂ ವಿಮರ್ಶೆಗಳು ಬಂದಿವೆ. ಆದರೆ, ಈ ಭಾಗವನ್ನು ಈ ಕೃತಿಯಲ್ಲಿ ಸೇರಿಸಿಲ್ಲ ಎಂಬುದು ಸಂಪಾದಕರ ನುಡಿ. ವಿವಿಧ ಕಾಲಘಟ್ಟದಲ್ಲಿ ಆಮೂರರಿಗೆ ಸಂದ ಪ್ರಶಸ್ತಿ-ಗೌರವಗಳ ಚಿತ್ರಗಳು ಕೃತಿಯ ಪರಿಣಾಮಕತೆಯನ್ನು ಹೆಚ್ಚಿಸಿದ್ದರೆ, ಕವಿ ಚೆನ್ನವೀರ ಕಣವಿ, ಎಚ್.ಎಸ್.ವಿ, ಸಿ. ನಾಗಣ್ಣ ಸೇರಿದಂತೆ ಇತರೆ ಕವಿಗಳು ಆಮೂರರ ಕುರಿತು ಬರೆದ ಕವಿತೆಗಳನ್ನು ಒಳಗೊಂಡಿದ್ದು, ಆಮೂರರ ಸಾಹಿತ್ಯ ಪ್ರೀತಿಯ ಮತ್ತೊಂದು ಆಯಾಮವನ್ನು ಪರಿಚಯಿಸುತ್ತವೆ. ಅಭಿನಂದನಾ ರೂಪದ ಈ ಗ್ರಂಥಕ್ಕೆ ‘ಸ್ವೀಕೃತಿ’ ಶೀರ್ಷಿಕೆ ನೀಡುವಂತೆ ಸ್ವತಃ ಆಮೂರರೇ ಸೂಚಿಸಿದ್ದಾಗಿ ಕೃತಿಯ ಬೆನ್ನುಡಿಯಲ್ಲಿ ಸಂಪಾದಕರು ಉಲ್ಲೇಖಿಸಿದ್ದಾರೆ.
©2024 Book Brahma Private Limited.