ತುಮಕೂರಿನ ಶ್ರೀ ಸಿದ್ಧಗಂಗಾ ಕ್ಷೇತ್ರದ ಮಹಿಮೆ, ಶೈಕ್ಷಣಿಕ ಕ್ಷೇತ್ರವಾಗಿ ಪರಿವರ್ತನೆ, ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆ ಒಳಗೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ವಿಕಾಸದ ಸಂಪೂರ್ಣ ಚಿತ್ರಣ ನೀಡುವ ಕೃತಿ-ದಾಸೋಹ ಸಿರಿ. ಪಂಡಿತ ಚನ್ನಪ್ಪ ಎರೇಸೀಮೆ ಅವರು ಪ್ರಧಾನ ಸಂಪಾದಕರು. ಟಿ.ಆರ್. ಮಹಾದೇವಯ್ಯ, ಎಚ್.ವಿ.ವೀರಭದ್ರಯ್ಯ ಹಾಗೂ ಬಿ.ವೀರಭದ್ರಯ್ಯ ಸಂಪಾದಕರು.
ಸಿದ್ಧಗಂಗಾ ಕ್ಷೇತ್ರದ ನೆನಪಾದರೆ ಸಾಕು-ಅಲ್ಲಿಯ ದಾಸೋಹ ಸೇವೆ ಮೊದಲು ನೆನಪಿಗೆ ಬರುತ್ತದೆ. ಊಟ-ವಸತಿ-ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಈ ಕ್ಷೇತ್ರದ ಸೇವೆಗೆ ಕುಂದು ಎಂಬುದೇ ಇಲ್ಲ. 1930ರ ಮಾಚ್ 3 ರಿಂದ ಶಿವಕುಮಾರ ಸ್ವಾಮೀಜಿ ಅವರು ಈ ಮಠ ಮುನ್ನಡೆಸುವ ಹೊಣೆ ಹೊತ್ತುಕೊಂಡಾಗಿನ ದಯನೀಯ ಸ್ಥಿತಿ-ಗತಿಯ ವಿವರಣೆಯಿಂದ ಹಿಡಿದು ಇಂದಿನ ವಿಶ್ವವ್ಯಾಪಿಯ ವಿರಾಟ ಸ್ವರೂಪವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.
ಶಿವಕುಮಾರ ಸ್ವಾಮೀಜಿಯವರ ವಜ್ರಮಹೋತ್ಸವದ ಸಂದರ್ಭದಲ್ಲಿ ವಜ್ರಮಹೋತ್ಸವ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಜಂಟಿ ಪ್ರಯತ್ನವಾಗಿ ‘ದಾಸೋಹ ಸಿರಿ’ ಪ್ರಕಟಗೊಂಡಿದೆ. ಈ ಕೃತಿಯಲ್ಲಿ ಶ್ರೀ ಕ್ಷೇತ್ರದ ಹಾಗೂ ಶ್ರೀಗಳ ಬಗ್ಗೆ ವಿವರಗಳಿವೆ. ಕ್ಷೇತ್ರ ಹಾಗೂ ಶ್ರೀಗಳ ಸೇವೆಯನ್ನು ಪ್ರಶಂಸಿಸಿ ಹಿರಿಯರಾದ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ, ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ , ಸಾಹಿತಿ ಶಿವರಾಮ ಕಾರಂತ ಸೇರಿದಂತೆ ಇತರೆ ಗಣ್ಯರ ಹಾರೈಕೆಗಳಿವೆ. ಗೋಸಲ ಪರಂಪರೆ, ಮಠ ಮತ್ತು ಸಮಾಜ, ವೀರಶೈವರ ವಿವಿಧ ಮಠಗಳ ಕೊಡುಗೆ ಹೀಗೆ ವಿವಿಧ ಅಧ್ಯಾಯಗಳಡಿ ವಿವಿಧ ಲೇಖಕ-ಚಿಂತಕರು ಬರೆದ ಲೇಖನಗಳ ಬೃಹತ್ ರಾಶಿಯೇ ಈ ಕೃತಿ ಒಳಗೊಂಡಿದೆ.
©2024 Book Brahma Private Limited.