‘ನೆಲದನಿ’ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿನಂದನ ಗ್ರಂಥ. ಎಚ್.ಎಸ್. ವೆಂಕಟೇಶಮೂರ್ತಿ ಈ ಗ್ರಂಥದ ಪ್ರಧಾನ ಸಂಪಾದಕರು. ಬಹುಮುಖಿ ಪ್ರತಿಭೆ ಮತ್ತು ವ್ಯಕ್ತಿತ್ವದ ಸಂಮ್ಮಿಲನವಾಗಿರುವ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರವರು ಪ್ರಸ್ತುತ ಕನ್ನಡ ಸಾಹಿತ್ಯ ವಿಮರ್ಶಾಲೋಕದಲ್ಲಿ ಪ್ರಬುದ್ಧ ಚಿಂತನೆಯ ಮಿನುಗು ತಾರೆ. ಸಾಹಿತ್ಯ, ಬೋಧನೆ, ಸಂಘಟನೆ, ಆಡಳಿತ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನರಹಳ್ಳಿಯವರು ಮಾಡಿರುವ, ಮಾಡುತ್ತಿರುವ ಸಾಧನೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಭಾರತೀಯ ಪರಂಪರೆಯಲ್ಲಿ ಗುರುವಿನ ಸ್ಥಾನ ಅತ್ಯಂತ ಉನ್ನತವಾದದ್ದು ಮತ್ತು ಶ್ರೇಷ್ಠವಾದದ್ದು. ನಿಜ ಗುರು ತನ್ನ ಕಾರ್ಯವ್ಯಾಪ್ತಿಯನ್ನು ಕೇವಲ ಬೋಧನೆಗೆ ಮಾತ್ರ ಸೀಮಿತಗೊಳಿಸದೆ ತಾನು ಬದುಕುವ ಸಮಾಜದಲ್ಲಿನ ಓರೆಕೋರೆಗಳನ್ನು ತನ್ನ ಚಿಂತನೆಯ ಮೂಲಕ ಒರೆಹಚ್ಚಿ ಅರಿವಿನ ದೀವಿಗೆಯನ್ನು ಬೆಳಗುತ್ತಾನೆ. ಅಂತಹ ಮಹತ್ಕಾರ್ಯ ಮಾಡುವವರ ಸಾಲಿನಲ್ಲಿ ನರಹಳ್ಳಿಯವರ ಹೆಸರು ಮುಂಚೂಣಿಯಲ್ಲಿದೆ ಎನ್ನುತ್ತಾರೆ ಪ್ರಕಾಶಕರು.
ಇನ್ನು ಈ ಕೃತಿಗೆ ಜಿ.ಎಸ್. ಶಿವರುದ್ರಪ್ಪ ಅವರ ಬೆನ್ನುಡಿ ಮಾತುಗಳಿದ್ದು, ‘ಇತ್ತೀಚಿನ ದಿನಗಳಲ್ಲಿ ನರಹಳ್ಳಿಯವರ ಬರವಣಿಗೆ ಬೇರೊಂದು ಆಯಾಮವನ್ನು ಪ್ರಕಟಿಸುತ್ತಾ ಕನ್ನಡದ ನೆಲಸಂಸ್ಕೃತಿಯ ಬೇರುಗಳನ್ನು ಅನ್ವೇಷಿಸುವ ಪ್ರವೃತ್ತಿಯಲ್ಲಿ ತೊಡಗಿದೆ’ ಎನ್ನುತ್ತಾರೆ. ಜೊತೆಗೆ ಕೀರ್ತಿನಾಥ ಕುರ್ತಕೋಟಿಯವರ ವಿಮರ್ಶೆಯ ಪ್ರಭಾವ ವಲಯದಿಂದ ಭಿನ್ನವಾದ ಬೇರೊಂದು ಮಾರ್ಗವೂ ಉಂಟೆಂಬುದನ್ನು ನರಹಳ್ಳಿಯವರ ಬರಹಗಳು ಸಾಬೀತು ಪಡಿಸುತ್ತವೆ ಎನ್ನುವ ಅವರು ಪರಂಪರೆಯ ಬಗ್ಗೆ ಗೌರವ, ವರ್ತಮಾನದ ಬಗ್ಗೆ ಸದಾ ಎಚ್ಚರ, ಭವಿಷ್ಯದ ಬಗ್ಗೆ ಭರವಸೆ-ಇತ್ಯಾದಿ ಲಕ್ಷಣಗಳಿಂದ ಸಮನ್ವಿತವಾದ ನರಹಳ್ಳಿಯವರ ಕ್ರಿಯಾಶೀಲ ವ್ಯಕ್ತಿತ್ವ ಈ ಹೊತ್ತಿನ ಸಾಂಸ್ಕೃತಿಕ ಅಗತ್ಯವಾಗಿದೆ ಎನ್ನುತ್ತಾರೆ. ಈ ಕೃತಿಯಲ್ಲಿ ನರಹಳ್ಳಿ ಅವರ ಆಪ್ತರು, ಒಡನಾಡಿಗಳು ಅವರ ಕುರಿತು ಬರೆದ ಅರ್ಥಪೂರ್ಣ ಅಭಿನಂದನ ಬರಹಗಳು ಸಂಕಲನಗೊಂಡಿವೆ.
©2024 Book Brahma Private Limited.