‘ಗ್ರಾಮ ಚೇತನ’ ಎಂ.ವ್ಹಿ.ಕಡಕೋಳ ಗುರುಗಳ ಅಭಿನಂದನ ಗ್ರಂಥ. ಒಬ್ಬ ವ್ಯಕ್ತಿ ಮನಸ್ಸು ಮಾಡಿ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ದುಡಿದು, ಪರೋಪಕಾರಿಯಾಗಿ ಬೆಳೆದರೆ ಏನೆಲ್ಲಾ ಸಾಧಿಸಬಹುದೆಂಬುದಕ್ಕೆ ಶ್ರೀ ಎಂ.ವ್ಹಿ. ಕಡಕೋಳ ಗುರುಗಳು ಮಾದರಿಯಾಗುತ್ತಾರೆ. ಜ್ಞಾನದೀವಿಗೆಯ ಮೂಲಕ ಭಾವಿ ಜನಾಂಗದ ಉಜ್ಜಲ ಭವಿಷ್ಯ ರೂಪಿಸುವ ಅಪರೂಪದ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಕೈಯಲ್ಲಿ ಕಲಿತ ಎಷ್ಟೋ ಜನ ವಿದ್ಯಾರ್ಥಿಗಳು ಇಂದು ಒಳ್ಳೆಯ ಸ್ಥಾನಮಾನದಲ್ಲಿದ್ದಾರೆ. ಅವರೆಲ್ಲಾ ಅವರನ್ನು ತುಂಬು ಹೃದಯದಿಂದ, ಗೌರವದಿಂದ ಸ್ಮರಿಸಿಕೊಳ್ಳುತ್ತಾರೆ.
ಕಡಕೋಳ ಗುರುಗಳು ಕಲಿಸುತ್ತಲೇ ಸಮಾಜ ಸೇವೆಗೆ ತೊಡಗಿಕೊಂಡವರು. ಊರಿನ ಯಾವುದೇ ಕೆಲಸವಿರಲಿ ಅಲ್ಲೆಲ್ಲಾ ಅವರ ಉಪಸ್ಥಿತಿ ಬೇಕೆಬೇಕು ಅನ್ನುವಷ್ಟು ಅವರು ಅನಿವಾರ್ಯವಾದವರು. ಗ್ರಾಮ ನೈರ್ಮಲ್ಯ, ರಸ್ತೆ ನಿರ್ಮಾಣ, ಬಸ್ ಸೌಕರ್ಯ, ಸಾರ್ವಜನಿಕ ಆಸ್ಪತ್ರೆ ಸ್ಥಾಪನೆ-ನಿರ್ಮಾಣ, ಶಿಕ್ಷಣ ಸಂಸ್ಥೆಯ ಸ್ಥಾಪನೆ- ಉಸ್ತುವಾರಿ, ಜಾತ್ರೆ-ಉತ್ಸವ, ನ್ಯಾಯ ನಿಬಂಧನೆ ಹೀಗೆ ಕೆಲಸ ಯಾವುದಿದ್ದರೂ ಕಡಕೋಳ ಗುರುಗಳು ಇಲ್ಲದೆ ನಡೆಯುವಂತಿಲ್ಲ. ತಮ್ಮ ಹರೆಯದ ವಯಸ್ಸಿಂದ ಮೊದಲು ಮಾಡಿ ಇಳಿವಯಸ್ಸಿನಲ್ಲೂ ಅವರು ಅದೇ ಸ್ಥಾನ-ಮಾನ, ಗೌರವಗಳಿಂದ ಕಲಕೇರಿ ಗ್ರಾಮದ ಭಾಗವಾಗಿ ಬೆಳೆದಿದ್ದಾರೆ. ಅವರ ಸಾರ್ಥಕ ಬದುಕಿಗೆ, ಅಪರೂಪದ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ ಗ್ರಾಮ ಚೇತನ ಅಭಿನಂದನ ಗ್ರಂಥ.
©2024 Book Brahma Private Limited.