ಎಂ.ಎಸ್. ವಿಜಯಾ ಹರನ್ ಅವರು ಸಂಪಾದಿಸಿರುವ ಕೃತಿ ‘ಬಲ್ಲವರು ಬಲ್ಲಂತೆ ಭೈರಪ್ಪ’. ಈ ಹೊತ್ತಿಗೆಯು ಭೈರಪ್ಪನವರ ತೊಂಬತ್ತು ವಸಂತಗಳನ್ನು ಪೂರೈಸಿದ ಸವಿನೆನಪಿಗಾಗಿ ಅವರಿಗೆ ಸಾಹಿತ್ಯಲೋಕ ಅದರದಿಂದ ಅರ್ಪಿಸಿದ ನಲ್ಮೆಯ ನುಡಿಗಾಣಿಕೆ. ಭೈರಪ್ಪನವರನ್ನು ಬಹುಕಾಲದಿಂದ ಆಪ್ತವಾಗಿ ಬಲ್ಲ ಅನೇಕರ ಅನುಭವಗಳೂ ಆತ್ಮೀಯತೆಗಳೂ ಆಸಕ್ತರಿಗೆ ಮುಟ್ಟಿಲ್ಲವೆಂಬ ಕೊರತೆಯನ್ನು ಕಳೆಯುವ ನಿಟ್ಟನಲ್ಲಿ ಸದ್ಯದ ಗ್ರಂಥ 'ಬಲ್ಲವರು ಬಲ್ಲಂತೆ ಭೈರಪ್ಪ' ಮಹತ್ತ್ವದ್ದೆನಿಸಿದೆ. ಇಲ್ಲಿ ಭೈರಪ್ಪನವರನ್ನು ಹಲವು ಮಜಲುಗಳಲ್ಲಿ ನೋಡಿ, ಒಡನಾಡಿ, ಮಾತನಾಡಿ, ಸ್ನೇಹಾದರಗಳನ್ನು ತುಂಬಿಕೊಂಡ ಸಾಹಿತ್ಯಸಾಧಕರ, ಸಂವೇದನಶೀಲ ಸಹೃದಯರ ಅನಿಸಿಕೆ ಅಭಿಪ್ರಾಯಗಳು ಬೆಚ್ಚಗಿನ ಪ್ರೀತಿ-ವಿಶ್ವಾಸಗಳ ತೆಕ್ಕೆಯಲ್ಲಿ ರೂಪುಗೊಂಡಿವೆ. ಹಾಗೆಂದಮಾತ್ರಕ್ಕೆ ಇಲ್ಲಿರುವುದು ಬಲಯ ಅಂಧ ಆರಾಧನೆಯಲ್ಲ, ಮುಗ್ಧವಾದ ಮೆಚ್ಚುಗೆಯಲ್ಲಿ, ಇದು ಅಕ್ಕರೆ ಬಾಧ್ಯತೆಯುಳ್ಳ ಎಚ್ಚರದ ಅಕ್ಷರಾಭಿವ್ಯಕ್ತಿಯೂ ಹೌದು. ಈ ವರೆಗೆ ಅಷ್ಟಾಗಿ ತಿಳಿದಿರದ - ಆದರೆ ತಿಳಿಯಲು ಬಯಸುವ - ಭೈರಪ್ಪನವರ ಆರ್ದ್ರವೂ ಆತ್ಮೀಯವೂ ಆದ ಸಾಹಿತ್ಯೇತರ ಮುಖಗಳನ್ನು ಪರಿಚಯ ಮಾಡಿಕೊಳ್ಳುವ ಸುಸಂದರ್ಭ ಒದಗಿದೆ. ಹೀಗಾಗಿ ಸದ್ಯದ ಕೃತಿಗೆ ತನ್ನದೇ ಆದ ವಿಶಿಷ್ಟ ಸ್ಥಾನ ದಲ್ಲಿದೆ. ಜೊತೆಗೆ ಅಕ್ಷರಲೋಕದಲ್ಲಿ ಮಾತ್ರವಲ್ಲದೆ ಆತ್ಮೀಯತೆಯ ವಿಶ್ವದಲ್ಲಿ ಕೂಡ ಭೈರಪ್ಪನವರು ಅಸಾಮಾನ್ಯರೆಂಬ ಸುಂದರವಾದ ಸತ್ಯ ಕೂಡ ಇಲ್ಲಿ ಅನಾವರಣಗೊಂಡಿದೆ.
©2024 Book Brahma Private Limited.