‘ಕಾಯಕಯೋಗಿ’ ಶ್ರೀಮಲ್ಲನಗೌಡರು ಮತ್ತು ಶ್ರೀಮತಿ ನೀಲಮ್ಮ ಮ.ಮುಂದಿನಮನಿ ಇವರ ದಾಂಪತ್ಯದ ಷಷ್ಠ್ಯಬ್ದಿ ಸಮಾರಂಭದ ಅಭಿನಂದನ ಗ್ರಂಥ. ಈ ಕೃತಿಯನ್ನು ಡಾ.ಎನ್.ಆರ್. ಹಡಪದ, ಚನ್ನಪ್ಪ ಅಂಗಡಿ, ಡಾ. ಎಚ್.ಬಿ. ಬಬಲಾದ ಸಂಪಾದಿಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜೇಕಿನಕಟ್ಟೆ ಗ್ರಾಮದ ಶ್ರೀಮಲ್ಲನಗೌಡ ಚನ್ನವೀರಗೌಡ ಮುಂದಿನಮನಿ ಅವರು ಅತ್ಯಂತ ಬಡತನದಲ್ಲಿ ಬೆಳೆದವರು. ಶಿಕ್ಷಣವನ್ನು ಮುಂದುವರೆಸಲಾಗದೇ ಕೃಷಿಯನ್ನೇ ತಮ್ಮ ಕಾಯಕವನ್ನಾಗಿಸಿಕೊಂಡು, ಎಳೆವಯಸ್ಸಿನಲ್ಲೇ ಮನೆತನದ ಜವಾಬ್ದಾರಿಯನ್ನು ಹೊತ್ತುಕೊಂಡರು. ಸಮಾಜ ಸೇವಾನಿಷ್ಠರೂ ಆದ ಗೌಡರು ತಮ್ಮ ತಂದೆಯ ಇಚ್ಛೆಯಂತೆ ಅದೇ ಗ್ರಾಮದ ಬಡ ಕನ್ಯೆಯನ್ನು ವರಿಸಿ ತಾಲೂಕಿನಲ್ಲೇ ಶ್ರೇಷ್ಠವೆನಿಸಿದ ಅಭಿಭಕ್ತ ಕುಟುಂಬವನ್ನು ರಚಿಸಿದರು. ಅವರ ಸಹಧರ್ಮೀಣಿ ನೀಲಮ್ಮನವರು ಪತಿಗೆ ತಕ್ಕ ಸತಿಯಾಗಿ, ಮನೆತನದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸುತ್ತ ಬಂದರು.
ಶಿಕ್ಷಣ ಪ್ರೇಮಿಗಳಾಗಿದ್ದ ಈ ದಂಪತಿ, ಬಡವಿದ್ಯಾರ್ಥಿಗಳ ಶಿಕ್ಷಣದ ವೆಚ್ಚ ನೋಡಿಕೊಂಡಿದ್ದಾರೆ. ಅರವತ್ತು ವರ್ಷಗಳ ತುಂಬು ದಾಂಪತ್ಯ ಜೀವನವನ್ನು ಸಾರ್ಥಕವಾಗಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರ ಕುಟುಂಬವರ್ಗದವರು, ಗುರುಹಿರಿಯರು, ಹಿತೈಷಿಗಳು ಹಾಗೂ ಗ್ರಾಮದ ಸಮಸ್ತ ನಾಗರಿಕರು ಅಭಿಮಾನ ಪೂರ್ವಕವಾಗಿ ‘ಕಾಯಕಯೋಗಿ’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಿದ್ದಾರೆ.
©2024 Book Brahma Private Limited.