ಇರುವಂತಿಗೆ

Author : ಸವಿತಾ ನಾಗಭೂಷಣ

Pages 600

₹ 700.00




Year of Publication: 2019
Published by: ವೈದೇಹಿ ಗೌರವ ಗ್ರಂಥ ಸಮಿತಿ
Address: ಶಿವಮೊಗ್ಗ

Synopsys

ವ‌ೈದೇಹಿ ಗೌರವ ಗ್ರಂಥ ಸಮಿತಿ ಪ್ರಕಟಿಸಿರುವ ಕೃತಿ 'ಇರುವಂತಿಗೆ'. ಸಾಹಿತಿ ವೈದೇಹಿ ಅವರ ಕುರಿತ ಸಾಹಿತ್ಯಕ ವಿವರಗಳು, ಸವಿತಾ ನಾಗಭೂಷಣ, ತಾರಿಣಿ ಶುಭದಾಯಿನಿ ಮುಂತಾದವರು ಕಂಡಂತೆ ವೈದೇಹಿ ಕುರಿತ ಕೃತಿ ಇದಾಗಿದೆ. ಸವಿತಾ ನಾಗಭೂಷಣ ಅವರು ಮೊದಲ ಮಾತಿನಲ್ಲಿ ಬರೆಯುತ್ತಾ, ’ಎಸ್‌ಎಸ್‌ಎಲ್‌ಸಿಗೆ ಓದಿಗೆ ಮಂಗಳ ಹಾಡಿ ಮನೆಯಲ್ಲಿ ಕಸೂತಿ ಹಾಕುತ್ತಾ, ಅಡಿಗೆ ಕೆಲಸದಲ್ಲಿ ನೆರವಾಗುತ್ತಾ, ಮುಂದೆ ಮದುವೆ ಯಾವಾಗ ಎಂದು ಆತಂಕದಲ್ಲಿ ಕಾಯುತ್ತಾ, ಬೆಳಗಿನಿಂದ ಸಂಜೆಯ ತನಕ ಗಾಣದೆತ್ತಿನಂತೆ ದುಡಿದು ಸಂಜೆ ಮುಖ ತೆಳೆದು, ತಲೆ ಬಾಚಿ ಹೂ ಮುಡಿದು, ಕೈಯ್ಯಲ್ಲಿ ಒಂದು ಪುಸ್ತಕ ಹಿಡಿದು, ಪುಸ್ತಕ ಪ್ರಪಂಚದಲ್ಲಿ ಕಳೆದು ಹೋಗುತ್ತಿದ್ದ ಹೆಣ್ಣು ಮಕ್ಕಳು ನೆನಪಾಗಿ, ಮನೆವಾರ್ತೆ, ಸಂಸಾರ, ಗಂಡ-ಮಕ್ಕಳು, ಬಸಿರು-ಬಾಣಂತನಗಳ ನಡುವೆ ಸವೆದುದನ್ನೇ ನಾದಿ ನಾದಿ ನವಪಾಕವನ್ನು ಉಣಬಡಿಸಿದ ವೈದೇಹಿಯ ಬಗ್ಗೆ ಮೆಚ್ಚುಗೆ ಮೂಡಿ, ವೈದೇಹಿಗೊಂದು ಗೌರವಗ್ರಂಥ ಕೊಟ್ಟರೆ ಹೇಗೆ ಎಂಬ ಸಣ್ಣ ಆಲೋಚನೆಯೊಂದು ಮೂಡಿತು. ಅವರು ಒಪ್ಪುವರೋ ಬಿಡುವರೋ ಕೇಳಿ ನೋಡೋಣ ಎನಿಸಿತು. ಅವರ ಕಥಾ ಪಾತ್ರಗಳೊಡನೆ ಬಂಧ-ಅನುಬಂಧ ಬೆಳೆಸಿಕೊಂಡವಳಾಗಿ ನಾನು ಧೈರ್ಯದಿಂದ, ವೈದೇಹಿಯವರನ್ನು ಕೇಳಿದೆ. ಅವರು ಒಂದೇ ಮಾತಿನಲ್ಲಿ ಬೇಡ ಕಣೆ’ ಎಂದರು. ನಾನು ಬಿಡದೇ ಯಾಕೆ ಎಂದಾದರೂ ಹೇಳಿ ಎಂದೆ. ’ಈ ಗೌರವ-ಗೀರವ ಎಲ್ಲ ಪುರುಷಲೋಕದ್ದು. ನಂಗ್ಯಾಕೆ? ಆದರೆ ಹಾಗೆ ಮಾಡಬೇಕು ಅಂತ ನಿಮಗೆ ಅನಿಸಿತಲ್ಲ, ಅದು ದೊಡ್ಡದು. ಅಷ್ಟೇ ಸಾಕು, ಅದೇ ಗೌರವ’ ಎಂದರು. ನಾನು ಬಿಡದೇ ಅದೆಲ್ಲಾ ನಮಗೆ ಬಿಡಿ, ಒಪ್ಪಿಕೊಳ್ಳಿ. ಈ ಗೌರವ ಗ್ರಂಥಕ್ಕೆ ನೀವು ಒಂದು ನೆಪ ಅಷ್ಟೆ. ನಿಮ್ಮನ್ನು ಗೌರವಿಸುವ ಮೂಲಕ ಅಕ್ಷರಮಾಲೆಯನ್ನು ತೊಟ್ಟು ಸಂಭ್ರಮಿಸಿದ ಆ ನಿಮ್ಮ ತಲೆಮಾರನ್ನು ಗೌರವಿಸುತ್ತಿದ್ದೇವೆ ಎಂದುಕೊಳ್ಳಿರಿ ಎಂದು ಭಿನ್ನವಿಸಿದೆ. ಏನನ್ನಿಸಿತೋ ಯೋಚಿಸಿ ಹೇಳುವೆ ಎಂದು ಹೇಳಿದವರು ಎರಡು ದಿನ ಬಿಟ್ಟು ಕರೆಮಾಡಿ, ’ಇದೆಲ್ಲಾ ಬೇಕಾ ಯೋಚಿಸು’ ಎಂದು ನನಗೇ ತಿರುಗುಬಾಣ ಬಿಟ್ಟರು. ’ಕವಿತೆ, ಕಥೆ, ಕಾದಂಬರಿ, ಪ್ರಬಂಧಗಳು, ಮಕ್ಕಳ ನಾಟಕಗಳು, ಅನುವಾದ ವ್ಯಕ್ತಿ ನಿರೂಪಣೆಗಳು, ಅಂಕಣ ಬರಹಗಳು, ಸಂಪಾದನೆ ಇಷ್ಟೆಲ್ಲಾ ಬರೆದಿರುವಿರಲ್ಲ, ಬರೋಬ್ಬರಿ 100 ಕಥೆಗಳನ್ನು ಬರೆದಿರುವಿರಿ, ಸಾಕಾ? ಎಂದು ನಗೆಯಾಡಿ ನಿಮ್ಮ ಒಪ್ಪಿಗೆ ಕೊಡಿ, ಮಿಕ್ಕಿದ್ದು ನನಗೆ ಬಿಡಿ ಎಂದೆ. ಅದರ ಫಲವೇ ಈ ಹೊತ್ತಿಗೆ ’ಇರುವಂತಿಗೆ’ ಎಂದಿದ್ದಾರೆ.

About the Author

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ...

READ MORE

Reviews

ವೈದೇಹಿಯವರಿಗೆ ಸಾರ್ಥಕ ಗೌರವ ಗ್ರಂಥ

ಬದುಕು ಹಾಗೂ ಬರಹಗಳನ್ನು ಹದವರಿತು ಕಟ್ಟಿಕೊಳ್ಳಲು ಬೌದ್ಧಿಕ ಪ್ರಖರತೆ, ಸೃಜನಶೀಲ ಸೂಕ್ಷತೆ, ಜೀವದ ಒಳಸೊಲ್ಲುಗಳನ್ನು ಆಲಿಸಬಲ್ಲ ಅಪಾರ ಸ೦ವೇದನಾಶೀಲತೆ ಗಳು ಒಂದರೊಳಗೊ೦ದು ಏಕವಾಗಿ ಬೆಸೆದಿರಬೇಕಾಗುತ್ತದೆ. ಹಾಲು ಹೆಪ್ಪಾಗಲು ಎಂಥ ಬಿಸಿ ಬೇಕು, ಎಷ್ಟು ಹನಿ ಮಜ್ಜಿಗೆ ಬೇಕು, ಸಾರು ರುಚಿಗೊಳ್ಳಲು ಎಷ್ಟು ಕುದಿ ಸಾಕು ಎಂಬೆಲ್ಲ ದೈನಂದಿನ ಬದುಕಿನ ಹದವರಿತ ಹೆಣ್ಣುಲೋಕವು ಕಥನದಲೂ ಅದನ್ನು ಸಿದ್ಧಿಸಿಕೊಂಡ ವಿದ್ಯಮಾನವು ವೈದೇಹಿಯವರ 'ಒಟ್ಟೂ ಬರವಣಿಗೆಯಲ್ಲಿ ಸಂಭವಿಸಿದೆ. ಸುಮಾರು ನಾಲ್ಕು ದಶಕಗಳ ಕಾಲ ನಿರಂತರವಾಗಿ ಹೆಣ್ಣು ಮನಸಿನ ಬೆಂಕಿ ಬೆಳಕು ನೆರಳು ಎಲ್ಲವನ್ನೂ ಸೂಕ್ಷ್ಮವಾಗಿ ಅಕ್ಷರಗಳಲ್ಲಿ ಪತಿಫಲಿಸಿದ ವೈದೇಹಿಯವರಿಗೆ 75 ವರ್ಷಗಳು ತುಂಬಿದ ವಿಶಿಷ್ಟ ಸಂದರ್ಭದಲ್ಲಿ “ಇರುವಂತಿಗೆ' ಹೆಸರಿನ ಗೌರವಗ್ರಂಥವನ್ನು ಅರ್ಪಿಸಲಾಯಿತು. ಕನ್ನಡದ ಸೂಕ್ಷ್ಮಸಂವೇದನೆಯ ಕಥೆಗಾರ್ತಿ ವೈದೇಹಿಯವರಿಗೆ ಅಷ್ಟೇ ಸೂಕ್ಷ್ಮಸಂವೇದನೆಯ ಕವಯತ್ರಿ ಸವಿತಾ ನಾಗಭೂಷಣರು ಇನ್ನೋರ್ವ ಗಮನಾರ್ಹ ಲೇಖಕಿ ತಾರಿಣಿ ಶುಭದಾಯಿನಿಯವರೊಂದಿಗೆ ಅಭಿನಂದನಾಪೂರ್ವಕವಾಗಿ ಕಟ್ಟಿಕೊಟ್ಟ ಕೃತಿಯಿದು.

ವೈದೇಹಿಯವರ ಬದುಕು ಬರಹಗಳನ್ನು ಅದರೆಲ್ಲ ಆಯಾಮದೊಂದಿಗೆ ಒಡಲುಗೊಂಡು ಕಟ್ಟಿದ ಶ್ರದ್ದೆಯ ಕಾಯಕವಿದು .ಕನ್ನಡದ ಪ್ರಮುಖ ವಿಮರ್ಶಕರು, ಸೃಜನಶೀಲ ಬರಹಗಾರರು, ವೈದೇಹಿಯವರ ಕುಟುಂಬಸ್ಥರು, ಒಡನಾಡಿಗಳು ಎಲ್ಲ ಸೇರಿ ಕಟ್ಟಿದ ಇಲ್ಲಿನ ಬರಹಗಳನ್ನು ಸಂಪಾದಕೀಯ ಬಳಗವು ಬಂಧ ಸಡಿಲಾಗದಂತೆ ಅ೦ದಗೆಡದರೆ ಒಟ್ಟಿಗೆ ಕಟ್ಟಿದ ಬಗೆ ವಿಶಿಷ್ಟವಾಗಿದೆ. ವೈದೇಹಿ ಅಧ್ಯಯನಕ್ಕೆ ಇರುವಂತಿಗೆ'ಯು ಸಮಗ್ರ ಆಕರಗ್ರಂಥವಾಗಿ ರೂಪುಗೊಂಡಿದ್ದು, ಅವರ ಬರಹದ ಬನಿಯನ್ನು ಮುಂದಿನ ಪೀಳಿಗೆಗೂ ಕಾಪಿಡುವದ್ರವ್ಯ ಇಲ್ಲಿದೆ. ಕನ್ನಡ ಸಾಹಿತ್ಯದ ಸಂದರ್ಭಗಲ್ಲಿ ಸ್ತ್ರೀಸಂವೇದನೆಗೆ ವಿಶಿಷ್ಟ ಮೊನಚು ಹಾಗೂ ಹೊಳಪನ್ನು ತಂದಿತ್ತವರು ವೈದೇಹಿ.ಎಪ್ಪತ್ತರ ದಶಕದಲ್ಲಿ ಮೂಡಿದ ಮಹಿಳಾಪರ ಚಿಂತನೆಯ ರಾಜಕೀಯ ದೃಷ್ಟಿಕೋನ ಕ್ಕೆ, ಹೆಣ್ಣು ದೇಹ ಹಾಗೂ ಮನಸ್ಸುಗಳನ್ನೊಳಗೊಂಡ ಅಖಂಡ ಸಂವೇದನೆಯ ಕೇಂದ್ರವೊಂದನ್ನು ಅವರ ಬರಹಗಳು ಜೋಡಿಸಿದವು. “ಅರೆ ಇದೇನಿದು? ಇವರು ಮಹಿಳಾ ಮಾನಸಲೋಕವನ್ನರಿಯಲು-ಬರೆಯಲು ಹುಟ್ಟಿಬಂದ ಇತಿಹಾಸಕಾರ್ತಿಯೇ? ಸಂಶೋಧಕಿಯೇ? ಅಥವಾ ಕೇವಲ ಸಾಕ್ಷಿಪ್ರಜ್ಞೆಯೆ?” ಎಂಬ ಪ್ರಶ್ನೆಯನ್ನು ಕೃತಿಯ ಪ್ರಸ್ತಾವನೆಯಲ್ಲಿ ಸವಿತಾ ನಾಗಭೂಷಣ ಅವರು ಎತ್ತುತ್ತಾರೆ. ಕೃತಿಯ ಒಡಲ್ಲಿರುವ ಅಷ್ಟೂ ಲೇಖನಗಳು ಈ ಮೂಲ ಪ್ರಶ್ನೆಗಳನ್ನು ಹಲವು ನೆಲೆಗಳಿಂದ ಉತ್ತರಿಸುತ್ತ ಹೋಗಿವೆ. ಪ್ರತಿಚಿಂತನೆಯೊಂದನ್ನು ನಿರ್ಮಿಸಬಲ್ಲ ಸ್ವಾಯತ್ತತೆಯನ್ನು ವೈದೇಹಿಯವರ ಬರಹಗಳಲ್ಲಿ ಗುರುತಿಸುವ ಕೆಲಸವನ್ನು ಕೃತಿಯು ಸಮರ್ಪಕವಾಗಿ ನಿಭಾಯಿಸಿದೆ.

'ಇರುವಂತಿಗೆ'ಯ ವಿಶೇಷತೆ ಇರುವುದು ವೈದೇಹಿಯವರ ಸಾಹಿತ್ಯದ ಕುರಿತ ವಿಮರ್ಶೆಯ ಸಮತೋಲಿತ ಖಚಿತತೆ ಹಾಗೂ ಅವರ ಬಾಂಧವ್ಯ ಲೋಕದ ಆರ್ದೃತೆಗಳೆರಡನ್ನೂ ಬೆಸೆಯುವ ಬಗೆಯಲ್ಲಿ, ಗೌರವಗ್ರಂಥಗಳಲ್ಲಿರುವ ಅತಿ ಪ್ರಶಂಸೆಯ ಗೀಳಿನಿಂದ ಇದು ಪಾರಾಗಿದೆ. ವೈದೇಹಿಯವರು ಕಾವ್ಯ, ಕತೆ, ಕಾದಂಬರಿ, ಪ್ರಬಂಧ, ಮಕ್ಕಳ ನಾಟಕ, ಜೀವನಚರಿತೆ, ಅನುವಾದ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿಕೊಂಡವರು. ಆದರೆ ಈ ಎಲ್ಲ ಬರವಣಿಗೆಯ ಮೂಲದಲ್ಲಿರುವುದು ಅವರ ಕಥನಗಾರಿಕೆಯ ಪ್ರತಿಭೆ. ಅವರ ಪ್ರಬಂಧಗಳಲ್ಲಿನ ಅಭಿನಯ ಧ್ಯಾನ, ಕತೆಗಳಲ್ಲಿನ ಮಾತುಗಳ ಮೊನಚು, ಪ್ರದೇಶಿಕ ನುಡಿಗಳ ಜೀವಂತ ಆವರಣ ಇವೆಲ್ಲ ಅವರ ಕಥನವನ್ನು ಅನನ್ಯಗೊಳಿಸಿದ ನೆಲೆಗಳು.

ರಾಜೇಂದ್ರಚೆನ್ನಿಯವರು ವೈದೇಹಿಯವರ ಕಥಾಪಾತ್ರಗಳ ಮಾತುಗಳಿಗಿರುವ ಧ್ವನಿಶಕ್ತಿಯ ಸೂಕ್ತ ಸ್ತರಗಳನ್ನು 'ಶ್ರಾವಣ ಪ್ರತಿಭೆ'ಯಾಗಿ ಗ್ರಹಿಸಿದರೆ, ಡಿ.ಎಸ್. ನಾಗಭೂಷಣರು ಅದೇ ಮಾತುಗಳು ಕೆಲವು ಕತೆಗಳಲ್ಲಿ ಗೌಜು, ಗದ್ದಲಗಳಾಗಿ ಉಳಿದುಬಿಡುವ ಮಿತಿಯನ್ನೂ ಗುರುತಿಸುತ್ತಾರೆ. ಕೆ.ವಿ. ತಿರುಮಲೇಶರು “ಗುಣಾಡ್ಯನ ಆಕಾಶಕ್ಕೆ ನಿಮದೊಂದು ಪರತ್ಯಾಕಾಶ” ಎನ್ನುವ ಮೂಲಕ ಅನುಕ್ತವಾಗಿ ಉಳಿದು ಬಿಡಬಹುದಾಗಿದ್ದ ಅಂಚಿನಲೋಕದ ಕಥೆಗಳನ್ನು ಉಜ್ವಲವಾಗಿಸಿದ ವೈದೇಹಿತನವನ್ನು ಬೆರಗಲ್ಲಿ ನಿರೂಪಿಸುತ್ತಾರೆ. 'ಮಲ್ಲಿನಾಥನಧ್ಯಾನ' ಪ್ರಬಂಧ ಸಂಕಲನವು ಅತ್ಯಂತ ಸಮರ್ಥವಾದ ಸಾಂಸ್ಕೃತಿಕ ಪಠ್ಯವೂ ಹೌದೆಂಬುದನ್ನು ಎಂ.ಎಸ್. ಆಶಾದೇವಿಯವರು ಪ್ರತಿಪಾದಿಸಿದರೆ, ವೈದೇಹಿಯವರ ಮಕ್ಕಳ ಸಾಹಿತ್ಯವನ್ನು ಕೆ.ವಿ. ಅಕ್ಷರ ಅವರು ‘ಏತರ್ಕ'ವೆಂಬ ಪರಿಕಲ್ಪನೆಯಲ್ಲಿ ಹಿಡಿದಿಡುತ್ತಾರೆ. ತರ್ಕತಾರತಮ್ಯವನ್ನು ಮೀರಿದ ರಾಜಕೀಯ ನಿಲುವೊಂದರ ಪ್ರತಿಪಾದನೆಯಗಿಯೂ ಅವರು ಇದನ್ನು ಗುರುತಿಸಿಕೊಳ್ಳಿತ್ತಾರೆ. ಸ್ತ್ರೀವಾದದ ಸೈದ್ಧಾಂತಿಕ ಹತಾರುಗಳನ್ನು ಬಾಟ್ಲಿಂಗ್ ಪೇಪರಿನಂತೆ ಹೀರಿಕೊಂಡು ಅದನ್ನು ವಿಸ್ತರಿಸಿದ ಬಗೆಯನ್ನು ಬಿ.ಎನ್. ಸುಮಿತ್ರಾಬಾಯಿಯವರು ವಿವರಿಸುವ 'ಬಗೆ ಭಿನ್ನವಾದುದು.. ಚಾವಡಿಯಷ್ಟೇ ಹಿತ್ತಲೂ ಉಜ್ವಲವಾದುದೆಂದು ತೋರಿಸಿಕೊಟ್ಟವರು ವೈದೇಹಿ.ಈ ಸತ್ಯವನ್ನು ಪ್ರಸ್ತುತ ಗೌರವ ಗ್ರಂಥವು ಧ್ವನಿಸಿದ ಕಾಳಜಿಯು ಗಮನಾರ್ಹವಾಗಿದೆ.

ಇಲ್ಲಿ ವೈದೇಹಿಯವರ ಬದುಕಿನ ಬಾಂಧವ್ಯಗಳ ಬಿಸುಪನ್ನು ಮುಟ್ಟಿಸುವಂಥ ಹೃದ್ಯ ಬರಹಗಳಿವೆ. ವೈದೇಹಿ ತುಂಬು ಕುಟುಂಬದಲ್ಲಿ ಬೆಳೆದ ಕುಟುಂಬವತ್ತಲೆ. ಅವರ ಬರವಣಿಗೆಯ ಕೇಂದ್ರವೂ ಕುಟುಂಬವೇ. ಅವರ ಪತಿ, ಇಬ್ಬರು ಹೆಣ್ಣುಮಕ್ಕಳು, ಮೊಮ್ಮಕ್ಕಳು, ಅಕ್ಕತಂಗಿಯರು, ಓರಗಿತ್ತಿಯರು ಬರೆದ ಆರ್ದೃ ಬರಹಗಳು ಕೌಟುಂಬಿಕ ಮಹಾಕಾವ್ಯದಂತಿವೆ. 'ಒಡನಾಟ' ಎಂಬ ಭಾಗದಲ್ಲಿ ಅವರ ಸಮಕಾಲೀನ ಹಾಗೂ ಹಿರಿ ಕಿರಿಯ ಲೇಖಕ-ಲೇಖಕಿಯರ ಕಣ್ಣಲ್ಲಿ ವೈದೇಹಿಯವರ ಪ್ರತಿಭೆ ವಿಶಿಷ್ಟವಾಗಿ ಮೂಡಿದೆ. ಅವರ ಕಥಾ ಪಾತ್ರಗಳ - ಜತೆಗಿನ ಒಡನಾಟವೂ ಇಲ್ಲಿ ಸೇರಿದೆ. ಕೃತಿಯ ಕೊನೆಯಲ್ಲಿ ಗಡಿಯಾಚೆಗಿನ - ನಂಟು ಎಂಬ ಭಾಗವಿದೆ, ಬಂಗಾಳಿ ಲೇಖಕಿ ನಬನೀತಾದೇವಸೇನ್, ತೆಲಗು - ಲೇಖಕಿ ಓಲ್ಲಾ, ತೇಜಸ್ವಿನಿ ನಿರಂಜನ ಮುಂತಾದವರ ಒಡನಾಟದ ಬರಹಗಳಿವೆ. - ವೈದೇಹಿಯವರ ಬರಹಗಳ ಪ್ರಖರತೆಯ ಉಲ್ಲೇಖವಿರುವಂತೆ, ಅವರು ಮಾಡುವ ತಂಬುಳಿ, ಗೊಜ್ಜು, ಹಪ್ಪಳ-ಸಂಡಿಗೆಗಳು, ಉಣಬಡಿಸಿ ಸಂಭ್ರಮಿಸುವ ಅವರ ಅಪ್ಪಟ ತಾಯ್ತನದ ಚಿತ್ರಗಳೂ ಇಲ್ಲಿವೆ.

'ತಿಳಿಸಾರು' ಕವಿತೆಯ ಮೂಲಕ ಜ್ಞಾನದ ಪುರುಷಾಧಿಕಾರವನ್ನು ಪ್ರಶ್ನಿಸುವ ಉಜ್ವಲ ಮಾದರಿಯೊಂದನ್ನು ಕಾಣಿಸಿದ ವೈದೇಹಿ, ಹೆಣ್ಣನದ ಸಕಲ ಸಂಭ್ರಮಗಳಿಗೂ ಘನತೆ ತಂದುಕೊಟ್ಟವರು. ಸಂಸಾರದೊಳಗಿನಿಂದಲೇ ಅರಿವಿನ ಹೊಸ ಲಯವನ್ನು ಆತ್ಮವಿಶ್ವಾಸದಿಂದ ಸ್ಥಾಪಿಸಿದ ವೈದೇಹಿಯವರನ್ನು ಅಪರೂಪದ ಬೆಳಕಿನಲ್ಲಿ ಕೃತಿಯು ಕಾಣಿಸಿದೆ. ಮಹಿಳಾ ಸಾಹಿತ್ಯವೆಂಬ ರಿಯಾಯತಿಯನ್ನು ಎಂದೂ ಬೇಡದ ವೈದೇಹಿಯವರ ಬರಹದ ಕಸುವನ್ನು ಭಾರತೀಯ ಹಾಗೂ ಕನ್ನಡ ಸಾಹಿತ್ಯ ಸಂದರ್ಬದಲ್ಲಿಟ್ಟು ನೋಡುವ ಭಿನ್ನ ಪ್ರಯತ್ನಗಳು ಇಲ್ಲಿವೆ. ಮರಳಿಮಣ್ಣಿಗೆ, ಮಲೆಗಳಲ್ಲಿ ಮದುಮಗಳು, ಡಾಂಬರುಬಂದುದು ಇಂತಹ ಕಥನಗಳು ಆಧುನಿಕತೆಯೊಂದಿಗೆ ನಡೆಸಿದ ಮುಖಾಮುಖಿಯನ್ನು ವೈದೇಹಿ ಕಥನವು ಹೆಣ್ಣುಲೋಕದ ಕಿಂಡಿಯಿಂದ ನಿಭಾಯಿಸಿದ ರೀತಿಯನ್ನು ಟಿ.ಅವಿನಾಶ್ ಉಲ್ಲೇಖಿಸಿದ್ದಾರೆ. ಇದೆಲ್ಲದರೊಂದಿಗೆ, ಆಧುನಿಕ ಮಹಿಳಾ ಸಾಹಿತ್ಯ ಕುರಿತ ಟಿಪ್ಪಣಿಗಳನ್ನು ಸೇರಿಸಿ 'ಇರುವಂತಿಗೆ'ಯನ್ನು ವಿಶಿಷ್ಟ ಆಕರ ಗ್ರಂಥವನ್ನಾಗಿ ರೂಪಿಸಲು ಸಂಪಾದಕಿಯರು ಶ್ರಮಿಸಿದ್ದಾರೆ. ಮಹಿಳಾ ಕಾವ್ಯ, ಕಥಾಸಾಹಿತ್ಯ, ಕಾದಂಬರಿಗಳು, ಮಹಿಳಾ ಆತ್ಮಕತೆಗಳನ್ನು ಕುರಿತ ಲೇಖನಗಳು ಇಲ್ಲಿ ಸೇರಿವೆ. ಒಟ್ಟೂ ಹೆಣ್ಣುನೋಟದ ಹೆಣಿಗೆಗೆ ಈ ಲೇಖನಗಳು ಸಾಣೆ ಹಿಡಿಯುವಂತಿವೆ. ಕೊನೆಯಲ್ಲಿ ವೈದೇಹಿಯವರ ಪತ್ರ ಹಾಗೂ ಚಿತ್ರಗಳ ಸಂಗ್ರಹ ಕೃತಿಗೆ ಕಳೆಕಟ್ಟುತ್ತ ತಾವೇ ಮಾತನಾಡುತ್ತವೆ.

ವೈದೇಹಿಯವರೆಡೆಗಿನ ಅಪಾರ ಅಭಿಮಾನ ಹಾಗೂ ಪ್ರೀತಿಯಿಂದ ಕಟ್ಟಿದ 'ಇರುವಂತಿಗೆ'ಯ ಸಂಪಾದಕೀಯದಲ್ಲಿ ಸವಿತಾ ನಾಗಭೂಷಣರ ಮಾತೊಂದಿದೆ. ಅವರು ಈ ಗ್ರಂಥಾರ್ಪಣೆಯ ಬಗ್ಗೆ ಪ್ರಸ್ತಾಪಿಸಿದಾಗ, “ಗೌರವ-ಗಿವ್ರವ ಎಲ್ಲಾ ಪುರುಷಲೋಕದ್ದು, ಅದೆಲ್ಲ ಬೇಡ ಕಣೆ” ಅಂದರಂತೆ ವೈದೇಹಿ. ಇದೊಂದು ಬರಿಯ ವಾಗಾಡಂಭರವಾಗದ ಅಚ್ಚ ಪ್ರಾಮಾಣಿಕ ಪ್ರಯತ್ನ ಎಂದರಿವಾದಾಗ ಅವರು ಒಪ್ಪಿಕೊಂಡರು. ಸವಿತಾ ನಾಗಭೂಷಣ ಹಾಗೂ ತಾರಿಣಿ ಶುಭದಾಯಿನಿಯವರ ಸಂಪಾದಕತ್ವದಲ್ಲಿ ಪ್ರಕಟವಾದ ಈ ಹೊತ್ತಗೆ ಯನ್ನು ಅರ್ಥಪೂರ್ಣಗೊಳಿಸುವಲ್ಲಿ ರೇಖಾಂಬಾ ಟಿ.ಎಲ್ ಹಾಗೂ ಪದ್ಮಾಕ್ಷಿ. ಕೆ. ಅವರ ಶ್ರಮವಿದೆ. ಹೆಣ್ಣು ಲಯವೊಂದನ್ನು ಭಾಷೆಯಲ್ಲಿ ಕಟ್ಟುವ ಕಾಯಕವೊಂದು ಹೀಗೆ ಸಂಪನ್ನಗೊಂಡಿದೆ.

-ಗೀತಾ ವಸಂತ 

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಜನವರಿ 2020)

............................................................................................................................................

ಇರುವಂತಿಗೆಯಲ್ಲಿ ಅಕ್ಕರೆ-ಆರ್‌ಕೆ-ಉದಯವಾಣಿ

Related Books