‘ಬಹುತ್ವ ಕಥನ’ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿಯವರ ಬದುಕು, ಬರಹಗಳ ಕುರಿತಾಗಿ ಒಳನೋಟವೊಂದನ್ನ ಒದಗಿಸುವ ‘ಅಭಿನಂದನ ಕೃತಿ’. ಮೂಡ್ನಾಕೂಡು ಚಿನ್ನಸ್ವಾಮಿಯವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಮೂಡ್ನಾಕೂಡು ಅವರ ಬದುಕು, ಬರಹದ ಕುರಿತಾದ ಈ ಕೃತಿಯನ್ನ ಲೇಖಕ ಸುಭಾಷ್ ರಾಜಮಾನೆ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ. ಮಲ್ಲೇಪುರಂ ಜಿ. ವೆಂಕಟೇಶ, ಬಿ.ಎಂ.ಹನೀಫ್, ಎಚ್. ದಂಡಪ್ಪನವರು ಸಂಪಾದಕ ಸಲಹಾ ಮಂಡಲಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಮೂಡ್ನಾಕೂಡು ಚಿನ್ನಸ್ವಾಮಿ ಅವರು ಕಳೆದ ನಾಲ್ಕು ದಶಕಗಳಿಂದ ನಿರಂತರವಾದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ದಾರಿಯೊಂದನ್ನ ನಿರ್ಮಿಸಿಕೊಂಡವರು. ಅವರು ಕನ್ನಡ ಸಾಹಿತ್ಯದ ಸತ್ವಶಾಲಿ ಮತ್ತು ಮಹತ್ವಪೂರ್ಣ ಕವಿಗಳಾಗಿದ್ದಾರೆ ಎನ್ನುತ್ತಾರೆ ಲೇಖಕ ಸುಭಾಷ್ ರಾಜಮಾನೆ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಎಷ್ಟೋ ಕವಿತೆಗಳು ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪಠ್ಯಗಳಲ್ಲಿ ಸೇರಿವೆ. ಲೋಕಗ್ರಹಿಕೆ ಮತ್ತು ಆಲೋಚನಾ ಕ್ರಮಗಳಿಗೆ ಹೊಸ ಸಂವೇದನೆಯನ್ನು ತುಂಬಿವೆ. ಕಾವ್ಯಾಭಿವ್ಯಕ್ತಿ ಮೂಡ್ನಾಕೂಡು ಅವರ ಸೃಜನಶೀಲತೆಯ ಒಂದು ಮುಖವಷ್ಟೇ..ಅವರು ಕನ್ನಡ ಸಾಹತ್ಯದ ಅತ್ಯುತ್ತಮ ಗದ್ಯ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಅವರ ‘ಮೋಹದ ದೀಪ’ ಮತ್ತು ಪಾಪಪ್ರಜ್ಞೆ ಕಥಾಸಂಕಲನದಲ್ಲಿರುವ ಸಣ್ಣಕತೆಗಳು ನವಿರಾದ ಭಾಷಿಕ ನಿರೂಪಣೆಯಿಂದ ಗಮನ ಸೆಳೆಯುತ್ತವೆ. ಅಸಮಾನತೆಯ ಕೂಪದಲ್ಲಿ ಬೇಯುವ ದಲಿತಲೋಕದ ನೋವು ಮತ್ತು ಸಂಕಟಗಳು ವಿವರಣಾತ್ಮಕ ನೆಲೆಯಲ್ಲಿ ಅನಾವರಣಗೊಂಡಿದೆ. ಕತೆಗಳು ನಿರಾಡಂಬರ ಮತ್ತು ಸಹಜ ಶೈಲಿಯಿಂದ ಓದುಗರ ಮನಸ್ಸನ್ನು ಆವರಿಸಿಕೊಳ್ಳುತ್ತವೆ.
ಈ ಕೃತಿಯಲ್ಲಿ ಹಲವು ಹಿರಿಯ ಲೇಖಕರ ಸ್ವತಂತ್ರ ಹಾಗೂ ಅನುವಾದಿತ ಲೇಖನಗಳಿವೆ. ದೇವನೂರ ಮಹಾದೇವ, ರಹಮತ್ ತರೀಕರೆ. ಓ.ಎಲ್.ನಾಗಭೂಷಣಸ್ವಾಮಿ, ನಟರಾಜ್ ಹುಳಿಯಾರ್, ಬಾಳಾಸಾಹೇಬ ಲೋಕಾಪುರ, ಸಿ.ಜಿ.ಮಂಜುಳಾ, ಎಂ.ಆರ್.ಕಮಲ, ತಾರಿಣಿ ಶುಭದಾಯಿನಿ, ಸಿರಾಜ್ ಅಹಮದ್, ಜಾಜಿ ದೇವೇಂದ್ರಪ್ಪ, ಎ.ರೀಟಾರೀನಿ, ಎಸ್. ಶಿವಲಿಂಗಂ, ಹನುಮಂತ, ಬಿ.ವೈ. ಲಲಿತಾಂಬ, ಟಿ.ಎಸ್.ವೇಣುಗೋಪಾಲ, ಶೈಲಜಾ, ಎಂ.ಎಸ್.ರಜನೀಕಾಂತ್ ಮೊದಲಾದವರ ಲೇಖನಗಳಿವೆ.
©2024 Book Brahma Private Limited.