ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ಮಂಡಳಿಯ ಪಠ್ಯಪುಸ್ತಕ ಸಮಿತಿ, ಕೇರಳ ರಾಜ್ಯ ಪಠ್ಯಪುಸ್ತಕ ಸಮಿತಿ ಹಾಗೂ ಕೇಂದ್ರ ಸರ್ಕಾರದ ಪಠ್ಯ ಪುಸ್ತಕ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಗಾಗಿ ಹತ್ತು ಹಲವು ಪ್ರಶಸ್ತಿ-ಗೌರವಗಳು ಲಭಿಸಿದ್ದು, ಬೆಂಗಳೂರಿನ ಚನ್ನಪ್ಪ ಎರೇಸೀಮೆ ಅಭಿನಂದನಾ ಸಮಿತಿಯು 1990ರಲ್ಲಿ ಟಿ.ಆರ್. ಮಹಾದೇವಯ್ಯ ಸಂಪಾದಕತ್ವದಲ್ಲಿ ‘ಚೆನ್ನ ಶಿಕ್ಷಣ ಸಿರಿ’ ಎಂಬ ಗೌರವ ಗ್ರಂಥವನ್ನು ಸಮರ್ಪಿಸಲಾಗಿತ್ತು.ಅವರು 2004ರಲ್ಲಿ ನಿಧನರಾದರು.