ಕರ್ನಾಟಕದ ದಾರ್ಶನಿಕ ಪಂಥ ಮತ್ತು ಆಚರಣೆ ಲೋಕಗಳನ್ನು ಕುರಿತು ಡಾ. ರಹಮತ್ ತರೀಕೆರೆ ಅವರ ಐದನೆಯ ಪುಸ್ತಕ. "ಕರ್ನಾಟಕ ಗುರುಪಂಥ". ಈ ಕೃತಿ ಕಳೆದ ಐದಾರು ವರುಷಗಳ ಸುತ್ತಾಟದ ಫಲ ಎನ್ನುತ್ತಾರೆ ಲೇಖಕರು. ಗುರು-ಶಿಷ್ಯ ಪರಂಪರೆಯುಳ್ಳ ಹಾಗೂ ತನ್ನೊಳಗೆ ಹಲವಾರು ಮಾರ್ಗಗಳನ್ನೂ ದಾರ್ಶನಿಕ ಪ್ರಸ್ಥಾನಗಳನ್ನೂ ಒಳಗೊಂಡಿರುವ ಒಂದು ವಿಶಾಲ ಪರಿಕಲ್ಪನೆಯಾಗಿ `ಗುರುಪಂಥ'ವನ್ನು ಇಲ್ಲಿ ಪರಿಗ್ರಹಿಸಲಾಗಿದೆ. ತಾತ್ವಿಕವಾಗಿ ಶರಣ, ನಾಥ, ಸೂಫಿಗಳು ಗುರುಪಂಥಗಳೇ. ಆದರೆ ಅವನ್ನು ಹೊರತುಪಡಿಸಿ `ಗುರುಪಂಥ’ದ ಪರಿಕಲ್ಪನೆಯನ್ನು ಇಲ್ಲಿ ಕಟ್ಟಿಕೊಳ್ಳಲಾಗಿದೆ. ಈ ಪರಿಕಲ್ಪನೆಯೊಳಗೆ, ಕಳೆದ ನಾಲ್ಕು ಶತಮಾನದ ಹರಹಿನಲ್ಲಿ ಕಾಣಿಸಿಕೊಳ್ಳುವ ಮುನ್ನೂರಕ್ಕೂ ಮಿಕ್ಕ ಯೋಗಿಗಳೂ ತತ್ವಪದಕಾರರೂ ಬರುತ್ತಾರೆ; ಅದ್ವೈತ ಅದ್ವಯ ಮುಂತಾದ ದಾರ್ಶನಿಕ ಪ್ರಸ್ಥಾನಗಳೂ, ಆರೂಢ ಅವಧೂತ ಅಚಲದಂತಹ ಮಾರ್ಗಗಳೂ ಹಾಗೂ ಇಂಚಗೇರಿ ಗುಡಿಕಲ್ ಸಿದ್ಧಾರೂಢ ಮುಂತಾದ ಪರಂಪರೆಗಳೂ ಬರುತ್ತವೆ. ಹೀಗಾಗಿ `ಗುರುಪಂಥ’ವೆಂಬ ಪರಿಕಲ್ಪನೆಯು ಮೇಲ್ನೋಟಕ್ಕೆ ಏಕರೂಪಿಯಾಗಿ ತೋರಿದರೂ, ವಾಸ್ತವದಲ್ಲಿ ಅದೊಂದು ಬಹುರೂಪಿ ಜಗತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.