ಭಾರತದಲ್ಲಿ ತತ್ವಶಾಸ್ತ್ರ

Author : ಬಿ.ಎನ್. ಸುಮಿತ್ರಾಬಾಯಿ

Pages 172

₹ 150.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

‘ಭಾರತದಲ್ಲಿ ತತ್ವಶಾಸ್ತ್ರ’ ಎಂಬುದು ಡಾ. ಎಂ.ಕೆ. ಗಂಗೋಪಾಧ್ಯಯ (ಡಾ. ಮೃಣಾಲ್ ಕಾಂತಿ ಗಂಗೋಪಾಧ್ಯಾಯ ) ಅವರು ಇಂಗ್ಲಿಷಿನಲ್ಲಿ ರಚಿಸಿದ ಕೃತಿಯನ್ನು ಲೇಖಕಿ ಬಿ.ಎನ್. ಸುಮಿತ್ರಾಬಾಯಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ಇದು. ವಿಶ್ವದ ಮೂಲವಸ್ತುವೇನು, ಅದಕ್ಕೆ ಪ್ರಮಾಣ ಯಾವುದು, ಆತ್ಮ, ಮುಕ್ತಿ, ಇಂತಹ ಅಂಶಗಳು ಚರ್ಚೆಯನ್ನು ತತ್ವಶಾಸ್ತ್ರದಲ್ಲಿ ಕೇಂದ್ರೀಕೃತವಾಗಿರುತ್ತವೆ. ಈ ಕುರಿತು ಪ್ರತಿಪಾದಿಸಿರುವ ಹತ್ತು ಹಲವು ದರ್ಶನಗಳ ಪಾತ್ರವೂ ಪ್ರಮುಖವಾಗಿವೆ. ದೇವರ ಕಲ್ಪನೆ, ವೈದಿಕ ಸಾಹಿತ್ಯವೂ ಮುಖ್ಯ ಅಂಶವಾಗುತ್ತದೆ. ಭಾರತೀಯ ತತ್ತ್ವಶಾಸ್ತ್ರವು ಬಹುಮುಖೀ ಪ್ರತಿಪಾದನೆಗಳ ಆಕರ. “ಬ್ರಹ್ಮನ್” ಎಂಬುದನ್ನು ಕುರಿತಂತೆ ಅನೇಕ ವ್ಯಾಖ್ಯಾನಗಳಿವೆ; ಅಂತೆಯೇ ಬೌದ್ಧ ಮತ್ತು ಜೈನ ತಾತ್ವಿಕ ಗ್ರಹಿಕೆಗಳಲ್ಲೂ ಭಿನ್ನತೆಯುಂಟು. ಯಾವ ದಾರ್ಶನಿಕ ಪಂಥವೂ ನೀತಿಬೋಧನೆಯನ್ನು ತತ್ತ್ವಶಾಸ್ತ್ರದ ಅವಿಚ್ಛಿನ್ನ ಭಾಗವೆಂದು ಪ್ರತಿಪಾದಿಸಿಲ್ಲ. ಆದ್ದರಿಂದ ಅನೇಕ ಭಾರತೀಯ ತತ್ತ್ವಶಾಸ್ತ್ರಗಳನ್ನು ಕುರಿತು ಹೇಳಬಹುದೇ ವಿನಾ ಒಂದು ತತ್ತ್ವಶಾಸ್ತ್ರ ಪ್ರಣಾಲಿಕೆಯ ಬಗೆಗಲ್ಲ. ಎಲ್ಲ ಶಾಖೆಗಳನ್ನೂ ಸಮಗ್ರವಾಗಿ ಪರಿಚಯಿಸಿಕೊಟ್ಟು, ಮೂಲಭೂತ ಅಂಶಗಳಾದ ಪ್ರಮಾಣ, ವಿಶ್ವದ ಅಸ್ತಿತ್ವ, ಪರಮಾಣುವಾದ, ಈಶ್ವರನ ಇರುವಿಕೆ, ಮುಂತಾದುವನ್ನು ಕುರಿತಂತೆ ವಿವಿಧ ಶಾಖೆಗಳ ದೃಷ್ಟಿಕೋನ ಮತ್ತು ಧೋರಣೆಗಳನ್ನು ಸರಳವಾಗಿ  ತಿಳಿಸಿಕೊಡುವ ಗ್ರಂಥ ಇದು. .

ಭಾರತೀಯ ತತ್ತ್ವಶಾಸ್ತ್ರವನ್ನು ಮೂಲಗ್ರಂಥಗಳನ್ನು ಅಭ್ಯಸಿಸಿದ  ಡಾ. ಮೃಣಾಲ್ ಕಾಂತಿ ಗಂಗೋಪಾಧ್ಯಾಯರು ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರೊಡನೆ ಜಂಟಿಯಾಗಿ ಕೃತಿಗಳನ್ನು ರಚಿಸಿದ್ದಾರೆ. 

About the Author

ಬಿ.ಎನ್. ಸುಮಿತ್ರಾಬಾಯಿ

ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್‌. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ,  ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ.  ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ  ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...

READ MORE

Reviews

(ಹೊಸತು, ಮೇ 2015, ಪುಸ್ತಕದ ಪರಿಚಯ)

ಅತಿ ಪ್ರಾಚೀನ ಹಾಗೂ ತುಂಬ ವಿಸ್ತಾರವುಳ್ಳ ಭಾರತೀಯ ತತ್ತ್ವಶಾಸ್ತ್ರವನ್ನು ಸಾಮಾನ್ಯ ಜನರಿಗೂ ನಿಲುಕುವಂತೆ ಸರಳವಾಗಿ ಪರಿಚಯಿಸುವ ಕೃತಿ ಇದು. ವಿಶ್ವದ ಬಗೆಗಿನ ಅರಿವನ್ನು ಹೆಚ್ಚಿಸಲು ನೆರವಾಗುವ ತತ್ತ್ವಶಾಸ್ತ್ರದ ಬಗೆಗೆ ಜಗತ್ತಿನಾದ್ಯಂತ ದಾರ್ಶನಿಕರು ಚಿಂತನೆ ನಡೆಸಿದ್ದಾರೆ. ಅಂತಯೇ ಭಾರತವೂ ಹಿಂದೆ ಬಿದ್ದಿಲ್ಲ ಮಾತ್ರವಲ್ಲ – ಒಂದು ಹೆಜ್ಜೆ ಮುಂದೆಯೇ ಸಾಗಿದೆ. ಹಾಗಾಗಿ ಭಾರತೀಯ ತತ್ತ್ವಶಾಸ್ತವು ಲೋಕದಲ್ಲೆಲ್ಲ ಖ್ಯಾತಿ ಪಡೆದು ಬಹು ಚರ್ಚಿತವೂ ಆಗಿ ವಿದ್ವಾಂಸರ ಗಮನ ಸೆಳೆದು ಮನ್ನಣೆ ಪಡೆದಿದೆ. ಕಾಲವೇಶಗಳ ವ್ಯಾಪ್ತಿಗೆ ಒಳಗಾಗಿ ಅನೇಕ ಅಭಿಪ್ರಾಯ ಭೇದಗಳು, ಹಲವು ವ್ಯಾಖ್ಯೆಗಳು, ವಿವಿಧ ಶಾಖೆಗಳು ಅಲ್ಲಿದ್ದು ಬಹುಮುಖೀ ಪ್ರತಿಪಾದನೆಗಳ ಮಹಾಸಾಗರವದು. ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧಗಳ ಬಗ್ಗೆ ಚಿಂತನೆ ನಡೆಸುತ್ತ ಕವಲುಗಳಾಗಿ ಒಡೆಯುತ್ತ ಮತ್ತೆ ಒಂದಾಗಿ ಭೋರ್ಗರೆಯುತ್ತ ಎಲ್ಲಿಂದೆಲ್ಲಿಗೋ ಹರಿದ ಭಾರತೀಯ ತತ್ತ್ವಶಾಸ್ತ್ರ ಹೊಸ ಹೊಸ ಹೊಳಹುಗಳನ್ನು ಗಳಿಸಿದೆ. ಬೌದ್ಧ, ಜೈನ, ಚಾರ್ವಾಕರಂಥ ನಿರೀಶ್ವರವಾದಿ ಪಂಥಗಳಿಂದ ಶ್ರೀಮಂತವಾಗಿದ್ದ ಭಾರತದ ದಾರ್ಶನಿಕ ಪರಂಪರೆ ಈಶ್ವರವಾದಿಗಳ ನೆಲೆಯಾಗಿ ಪರಿವರ್ತಿತವಾದ ಸತ್ಯವನ್ನೂ ಇಲ್ಲಿನ ಅಧ್ಯಾಯಗಳಲ್ಲಿ ಓದಬಹುದು. ಹಲವು ಪಂಥಗಳ ಆಪಾಯಕಾರಿ ಘರ್ಷಣೆಯಿಂದಾದ ಅನಾಹುತಗಳೂ ಇಲ್ಲಿ ಚರ್ಚೆಗೊಳಪಟ್ಟಿವೆ. ತತ್ತ್ವಶಾಸ್ತ್ರದ ಸಂಕ್ಷಿಪ್ತ ಇತಿಹಾಸದಂತಿರುವ ಅಮೂಲ್ಯ ಕೃತಿ

Related Books