ಭಾರತೀಯ ದರ್ಶನ ಹಾಗೂ ಪುರಾತನ ಇತಿಹಾಸದ ಪೈಕಿ ಲೋಕಾಯುತ ಎಂಬ ಪರಿಕಲ್ಪನೆ ಪ್ರಮುಖವಾಗಿದೆ. ಇಲ್ಲಿಯ ವಿಚಾರಗಳ ಬಗ್ಗೆ ಹಲವು ಕೃತಿಗಳ ಪ್ರಕಟಗೊಂಡಿದ್ದರೂ ದೇವಿಪ್ರಸಾದ ಚಟ್ಟೋಪಾಧ್ಯಾಯ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿ ಅತಿ ಹೆಚ್ಚು ಓದುಗರನ್ನು ಸೆಳೆದಿದೆ. ಇದರ ಕನ್ನಡಾನುವಾದವನ್ನು ಲೇಖಕ-ಚಿಂತಕ ಜಿ. ರಾಮಕೃಷ್ಣ ಅವರು ಮಾಡಿದ್ದಾರೆ. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಹಾ.ಮಾ.ನಾಯಕ ಪ್ರಶಸ್ತಿ’ (2011) ಲಭಿಸಿದೆ. ಭಾರತೀಯ ಪ್ರಾಚೀನ ಸಾಹಿತ್ಯವೊಂದರ ಸಮಗ್ರ ವಿಶ್ಲೇಷಣೆಯ ಭಾಗವಾಗಿ ಈ ಕೃತಿಯು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತಿದೆ.
(ಹೊಸತು, ಫೆಬ್ರವರಿ 2012, ಪುಸ್ತಕದ ಪರಿಚಯ)
ದೇವಿಪ್ರಸಾದ್ ಚಟ್ಟೋವಾಧ್ಯಾಯರ ಉತ್ಕೃಷ್ಟ ಕೃತಿ ಲೋಕಾಯತವು ಕನ್ನಡಕ್ಕೆ ಅನುವಾದಗೊಂಡುದೇ ಸಂತೋಷದ ಸಂಗತಿ. ನಮ್ಮ ನೆಲದಲ್ಲೇ ನಡೆದುಹೋಗಿರುವ ಚರಿತ್ರೆಯ ಅದ್ಭುತ ಕಥನದ ಅನಾವರಣ, ಪ್ರಾಚೀನ ಭಾರತದ ಬುಡಕಟ್ಟು ಸಂಸ್ಕೃತಿಗಳ ಸಮೂಹಜೀವನ ವ್ಯವಸ್ಥೆಯಿಂದ ಮುಂದೆ ಕೃಷಿ ಪದ್ಧತಿಗೆ ಪಲ್ಲಟಗೊಳ್ಳುವ ಜನಜೀವನ, ವಿವಿಧ ಆಚರಣೆಗಳು ಇಲ್ಲಿ ಪ್ರಸ್ತಾಪಿತವಾಗಿವೆ. ನಾವಿಂದು ಅನುಸರಿಸುವ ಅನೇಕ ಮೂಢಾಚಾರಗಳು ಅಂದಿನ ದಿನಗಳಲ್ಲಿ ಹೇಗೆ ಗ್ರಹಿಸಲ್ಪಟ್ಟಿದ್ದುವು ಮತ್ತು ಮೂಲ ಸಂಸ್ಕೃತಿಯ ಬೇರು ಎಲ್ಲಿತ್ತು ಎಂಬುದನ್ನು ಶೋಧಿಸುತ್ತ ಸಾಗುವ ಕೃತಿ ಬೇಟೆಯ ಹಂತದಿಂದ ಕೃಷಿಯ ಕಡೆಗೆ ವಾಲಿದ ಸಂದರ್ಭದಲ್ಲಿ, ಹಂಚಿ ತಿನ್ನುವ ಸಮಾನತೆಯ ಕಾಲ ಕೊನೆಗೊಂಡು ಮನುಷ್ಯ ನೆಲದ ಹಕ್ಕು ಸ್ಥಾಪಿಸುವ ಹಂತದಲ್ಲಿ ಸಂಘರ್ಷಗಳುಂಟಾಗಿ ವರ್ಗಪ್ರಜ್ಞೆ ಮೂಡಿತು. ಇಲ್ಲಿ ವೇದಪೂರ್ವ - ವೇದೋತ್ತರ ಕಾಲದ ಘಟನೆಗಳೆಲ್ಲ ಮೆರವಣಿಗೆಯಂತೆ ಸಾಲಾಗಿ ಕಣ್ಣಮುಂದೆ ಸಾಗುತ್ತದೆ. ವಿವಿಧ ಕಾಲಘಟ್ಟಗಳಲ್ಲಿ ಬಗೆ ಬಗೆಯ ಆಚಾರಗಳು, ನಾಸ್ತಿಕ-ಆಸ್ತಿಕ ದರ್ಶನಗಳು, ಕಲ್ಪನೆಗಳು, ಪ್ರಾರ್ಥನೆ, ಹಾರೈಕೆ ಇವೆಲ್ಲ ಆಹಾರ ದೊರೆಯಲೆಂದು ಆಶಿಸುವ ಅಪೇಕ್ಷೆಗಳಾಗಿದ್ದು ಚರಿತ್ರೆಯಲ್ಲಿ ಮಾನವ ಜೀವನದ ಯಾವ ಘಟ್ಟವನ್ನೂ ಬಿಟ್ಟು ಮುಂದುವರಿಯಲು ಅಸಾಧ್ಯವೆಂಬ ಸತ್ಯವನ್ನು ಲೋಕಾಯತ ಕೃತಿ ನಮಗೆ ತಿಳಿಸುತ್ತದೆ. ಪ್ರಾಚೀನ ಭೌತವಾದ, ಸಾಮಾಜ ಹಿನ್ನೆಲೆ, ಭೌತವಾದ, ಭಾವನಾವಾದಗಳೆಂಬ ನಾಲ್ಕು ಅಧ್ಯಾಯಗಳಲ್ಲಿರುವ ಈ ಅದ್ವಿತೀಯ ಗ್ರಂಥವನ್ನು, ಇಂಗ್ಲಿಷ್ ಆವೃತ್ತಿ ಒಂದು ೫೨ ವರ್ಷಗಳಾದರೂ ಕನ್ನಡಕ್ಕೆ ತರಲು ಯಾರ ಮನಸ್ಸು ಮಾಡಿಲ್ಲದ ಸಂದರ್ಭದಲ್ಲಿ ಡಾ| ಜಿ. ಆರ್. ಅನುವಾದಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ ಹೇಳುತ್ತ ಇಲ್ಲಿನ ಅಸಂಖ್ಯ - ಅಶುಲ್ಕ ವೈಚಾರಿಕ ನಿಲುವನ್ನು ಸವಿಯೋಣ.
©2024 Book Brahma Private Limited.