ಚೀನಾದ ತತ್ವಶಾಸ್ತ್ರ ಎಂದೊಡನೆ ಕನ್ಪ್ಯೂಶಿಯಸ್ ಮತ್ತು ತವೋ ಹೆಸರುಗಳಷ್ಟೇ ಮುನ್ನೆಲೆಯಲ್ಲಿ ನಿಲ್ಲುತ್ತವೆ. ಕೆಲವು ಜನಪ್ರಿಯ ಪಲುಕುಗಳನ್ನೇ ಮುಂದಿಟ್ಟುಕೊಂಡು ಚೀನಾದ ತತ್ವಶಾಸ್ತ್ರವನ್ನ ಚರ್ಚಿಸುವವರೂ ಇದ್ದಾರೆ. ಇವುಗಳ ನಡುವೆ, ಇತರ ಶಾಖೆಗಳ ಬಗ್ಗೆಯೂ ಬೆಳಕನ್ನು ಹರಿಸುವ ಕೆಲಸವನ್ನು ಈ ಕೃತಿ ಮಾಡುತ್ತದೆ. ಯಿನ್ಯಾಂಗ್ ಶಾಖೆ ಮತ್ತು ಬೌದ್ಧಮತದ ದಾರ್ಶನಿಕ ತತ್ವಗಳನ್ನು ಇದು ವಿಸ್ತಾರವಾಗಿ ಚರ್ಚಿಸುತ್ತದೆ. ಬೌದ್ದಧರ್ಮಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧವಿರುವುದರಿಂದ, ಭಾರತ-ಚೀಣಾ ನಡುವಿನ ದಾರ್ಶನಿಕ ಕೊಡುಕೊಳ್ಳುವಿಕೆಗಳ ಕುರಿತಂತೆ ಈ ಕೃತಿಯಲ್ಲಿ ವಿವರಗಳು ದೊರಕುತ್ತವೆ. ಕನ್ಪ್ಯೂಶಿಯಸ್ ತತ್ವ, ತವೋ ಸಿದ್ದಾಂತ, ನ್ಯಾಯಪರತೆಯ ತತ್ವ, ಮೋ ಸಿದ್ದಾಂತ, ನಾಮಧೇಯಗಳ ಶಾಖೆ, ಯಿನ್-ಯಾಂಗ್ ಶಾಖೆ, ಬೌದ್ದರ ಸಿದ್ದಾಂತಗಳು, ನವ-ಕನ್‌ಫೋಶಿಯಸ್ ಪಂಥ, ಸಂದೇಹಿ ವಿಚಾರವಾದ ಮತ್ತು ಭೌತವಾದ ಹೀಗೆ ಎಲ್ಲ ಶಾಖೆಗಳನ್ನೂ ಚಾರಿತ್ರಿಕ ಮತ್ತು ಸಾಮಾಜಿಕ ಸನ್ನಿವೇಶಗಳ ತಿಳುವಳಿಕೆಯೊಡನ ಪರಾಮರ್ಶೆ ಮಾಡುವ ಈ ಸಂಪುಟವು ಓದುಗನಿಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ.
(ಹೊಸತು, ಮೇ 2015, ಪುಸ್ತಕದ ಪರಿಚಯ)
ಚೀಣ ಇಂದು ಆಧುನಿಕ ರಾಷ್ಟ್ರಗಳಲ್ಲೊಂದು, ಎಲ್ಲರೂ ಆ ದೇಶದ ಕಡೆಗೆ ಮುಖ ಮಾಡಿದ್ದಾರೆ. ಈ ದೇಶದ ಬಗೆಗೆ ಸುಮಾರು ಕ್ರಿ. ಪೂ. ೧೬೦೦ರಷ್ಟು ಹಿಂದಕ್ಕೆ ದೃಷ್ಟಿ ಹಾಯಿಸಿ ಇತಿಹಾಸವನ್ನು ಬಗೆದು ಅಲ್ಲಿನ ಪಾರಂಭದ ತತ್ತ್ವಶಾಸ್ತ್ರದ ಬೇರುಗಳನ್ನು ಅರ್ಥೈಸುವ ಈ ಪ್ರಯತ್ನ ಶ್ಲಾಘನೀಯ. ಓದುಗರಿಗೊಂದು ರೋಚಕ ಅನುಭವ. ಪ್ರಾಚೀನ ಚೀಣವು ದೈವೀಕಲ್ಪನೆಗಳಿಗೆ – ಮತಧರ್ಮಗಳಿಗೆ ಎಂದೂ ಪ್ರಾಮುಖ್ಯ ಕೊಟ್ಟಿರಲಿಲ್ಲ. ಮುಂದೆ ಅಲ್ಲಿ ಬೌದ್ಧಧರ್ಮ ಹೆಚ್ಚು ಪ್ರವರ್ಧಮಾನಕ್ಕೆ ಬರಲು ಈ ಮನೋಭಾವನೆಯೂ ಹೆಚ್ಚು ಗುಣಾತ್ಮಕವಾಗಿದ್ದಿರಬಹುದು. ಚೀಣದ ಪ್ರಾಚೀನ ತತ್ತ್ವಶಾಸ್ತ್ರವು ಹೊಸ ದೃಷ್ಟಿಕೋನ ಬೆಳೆಸಿಕೊಂಡಿತ್ತು ಎನ್ನುವುದು ಇದರಿಂದ ಸ್ಪಷ್ಟ ಸದಾ ಆಧ್ಯಾತ್ಮದ ಗುಂಗಿನಲ್ಲಿರದೆ ಹೊಸ ವಿಚಾರಗಳಿಗೆ ತೆರೆದುಕೊಂಡಿದ್ದ ಇಲ್ಲಿನ ತತ್ತ್ವಶಾಸ್ತ್ರಕ್ಕೆ ಜಗತ್ತಿನಲ್ಲೆಲ್ಲ ವಿಶಿಷ್ಟ ಸ್ಥಾನವಿದೆ. ಈ ಗಂಥದ ವಿಶೇಷವೆಂದರೆ ಭಾರತದ ತತ್ತ್ವಶಾಸ್ತ್ರ ಶಾಖೆಗಳೊಡನೆ ಇಲ್ಲಿನವುಗಳನ್ನು ತುಲನೆ ಮಾಡಿರುವುದು, ಕನ್‌ಪ್ಯೂಷಿಯಸ್, ತವೋಸಿದ್ಧಾಂತ, ಮೋ ಹಾಗೂ ಇತರ ವೈಚಾರಿಕ ತತ್ತ್ವಜ್ಞಾನ ಶಾಖೆಗಳ ವಿವರ ಕೊಟ್ಟಿರುವ ಈ ಗ್ರಂಥ ಅಧ್ಯಯನ ಯೋಗ್ಯವಾಗಿದ್ದು ಅಪರೂಪದ ಮಾಹಿತಿ ಸಂಗ್ರಹವಾಗಿದೆ. ಇಂಗ್ಲಿಷ್ ಮೂಲದ ಲೇಖಕರು ಮತ್ತು ಅನುವಾದಕರು ಒಬ್ಬರೇ ಆಗಿರುವುದರಿಂದ ಕೃತಿ ಇನ್ನಷ್ಟು ಸ್ಪುಟವಾಗಿ ಮೌಲಿಕವಾಗಿದೆ.
©2024 Book Brahma Private Limited.