‘ಸಿದ್ರಾಮಪ್ಪ ಮುಕರಂಬೆ ತತ್ತ್ವಪದಗಳು’ ಕೃತಿಯು ರಘುಶಂಖ ಭಾತಂಬ್ರಾ ಅವರ ತತ್ತ್ವಪದಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ರಘುನಾಥ ಹಡಪದ, ‘ಸ್ವರ ವಚನಗಳೆಂದರೆ ಪದ್ಯವಲ್ಲದ, ಗದ್ಯವೂ ಅಲ್ಲದ ನುಡಿಗಟ್ಟುಗಳಿಂದ ಕೂಡಿದ ಹಾಡುಗಬ್ಬಗಳಾಗಿರುತ್ತವೆ. ಇವುಗಳಿಗೆ ಆರಂಭದಲ್ಲಿ ಪಲ್ಲವಿ ಮತ್ತು ಅನುಪಲ್ಲವಿಗಳಿದ್ದರೆ, ಅಂತ್ಯದಲ್ಲಿ ವಚನಗಳಂತೆಯೇ ಅಂಕಿತನಾಮ ಸೇರ್ಪಡೆಯಾಗಿರುತ್ತದೆ. ಮಧ್ಯದಲ್ಲಿ, ಮೂರು ಇಲ್ಲವೆ ಅದಕ್ಕಿಂತ ಹೆಚ್ಚಿನ ನುಡಿಗಟ್ಟುಗಳಿರುತ್ತವೆ. ಮೊದಲಿಗೆ ಪಲ್ಲವಿ ಅನುಪಲ್ಲವಿಗಳು ಹಾಡಲ್ಪಟ್ಟು, ನಂತರದಲ್ಲಿ ನುಡಿಗಟ್ಟುಗಳು ಹಾಡಲ್ಪಡುತ್ತವೆ. ಹಾಡಲ್ಪಟ್ಟ ಪ್ರತಿಯೊಂದು ನುಡಿಗಟ್ಟಿನ ಅಂತ್ಯದಲ್ಲಿ ಪಲ್ಲವಿ ಮನರಾವರ್ತನೆಗೊಳ್ಳುತ್ತದೆ. ಪಲ್ಲವಿ, ನುಡಿಗಟ್ಟುಗಳು ಮತ್ತು ಅಂಕಿತನಾಮದಿಂದ ಕೂಡಿರುವ ಈ ರೀತಿಯ ಗಾಯನ ಶೈಲಿಯ ವಚನಗಳೇ ಸ್ವರವಚನಗಳೆಂದು ಹೇಳಿಸಿಕೊಳ್ಳುತ್ತವೆ. ಕಲ್ಯಾಣದ ಬಸವಾದಿ ಶರಣರನೇಕರು ಈ ಸಾಹಿತ್ಯವನ್ನು ರಚಿಸಿ, ತತ್ವಪರಂಪರೆಗೆ ನಾಂದಿ ಹಾಡಿದ್ದಾರೆ. ಇದಾದ ನಂತರ, ದಾಸರ ಪರಂಪರೆಯೊಂದು ಹುಟ್ಟಿಕೊಂಡಿತು. ಶರಣರಿಂದ ಪ್ರೇರಣೆ ಪಡೆದ ಈ ಪರಂಪರೆಯು ಸ್ವರವಚನಗಳೊಂದಿಗೆ ಕೀರ್ತನೆಗಳನ್ನು ರಚಿಸಲು ಪ್ರಾರಂಭಿಸಿತು. ಶ್ರೀಪಾದರಿಂದ ಆರಂಭಗೊಂಡ ಇದು 19ನೇ ಶತಮಾನದವರೆಗೂ ಮುಂದುವರೆಯಿತು. ಈ ಪರಂಪರೆಯಲ್ಲಿ 30ಕ್ಕಿಂತಲೂ ಹೆಚ್ಚಿನ ದಾಸಶ್ರೇಷ್ಠರು ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಸಾಹಿತ್ಯವನ್ನು ಉಗಾಭೋಗ, ಸುಳಾದಿ ಮತ್ತು ಕೀರ್ತನೆಗಳೆಂಬ ಪ್ರಕಾರಗಳಲ್ಲಿ ರಚಿಸಿದ್ದಾರೆ. ಈ ಸಾಹಿತ್ಯವು ಪಲ್ಲವಿ, ಅನುಪಲ್ಲವಿ ಮತ್ತು ನುಡಿಗಳಿಂದ ಕೂಡಿದ್ದು, ರಾಗ ತಾಳಸಹಿತವಾಗಿ ಹಾಡಲಿಕ್ಕೆ ಸಿದ್ರಾಮಪ್ಪನವರ ಸಾಹಿತ್ಯದಲ್ಲಿ ಕೆಲವು ತತ್ತ್ವಪದಗಳು, ಕೆಲವು ಭಜನಾ ಪದಗಳಾಗಿದ್ದರೆ, ಇನ್ನು ಕೆಲವು ನೀತಿಬೋಧಕಗಳಾಗಿ ಧಾರ್ಮಿಕ ಹಾಗೂ ವೈಚಾರಿಕ ನೆಲೆಗಟ್ಟಿನ ಮೇಲೆ ನಿಂತಿವೆ. ಇವರ ಭಜನಾ ಪದಗಳಲ್ಲಿ ರೇಣುಕಾಚಾರ್ಯ ಹಾ. ಧೂಳನಾಥನ ಕುರಿತ ಪದಗಳಾದರೆ, ಬಾ ಬೇಗ ಶಂಕರಿ, ದೇವಿ ನಿನ್ನ ಜಾಲ, ಓಂಕಾರ ರೂಪಿಣಿ, ಜಗದಂಬಾ, ಜಗಜ್ಜನನಿ ಮೊದಲಾದವು ದೇವಿ ಕುರಿತ ಭಜನೆಗಳಾಗಿವೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. 12ನೇ ಶತಮಾನದ ಶರಣರು ಹಾಗೂ ಶರಣರ ಸಿದ್ಧಾಂತಗಳನ್ನು ದೃಢವಾಗಿ ನಂಬಿದ್ದ ಸಿದ್ರಾಮಪ್ಪನವರು ಶರಣ ಶರಣೆಯರನ್ನು ಸ್ತುತಿಸದೇ ಇರಲಿಲ್ಲ. 'ಬಸವಲಿಂಗ ಎಂಬ ಪದದಲ್ಲಿ ಬಸವಣ್ಣನವರನ್ನು ಕೊಂಡಾಡಿದ ಇವರು 'ಎಂದು ಬರುವಿ ಚೆನ್ನಬಸವಣ್ಣ?' ಎಂದು ಚೆನ್ನಬಸವಣ್ಣನವರನ್ನು ಕೇಳಿಯೇ ಬಿಟ್ಟಿದ್ದಾರೆ. 'ಆ ತಂಗಿಯರೆಲ್ಲ' ಎನ್ನುವ ಪದದಲ್ಲಿ ನೀಲಮ್ಮ ತಾಯಿಯವರನ್ನು ಮನಸಾರೆ ಸ್ಮರಿಸಿದ್ದಾರೆ. ಅಷ್ಟಾವರಣಗಳಲ್ಲಿ ನಿಷ್ಠೆಯುಳ್ಳಂತಹ ಮುಕರಂಬೆಯವರು ಗುರುವನ್ನು 'ಗುರುವೆ ಭರದಿಂದ ಬಾರೆ' ಎಂದು ಸ್ವಾಗತಿಸಿದ್ದಾರೆ. ಶೂನ್ಯಪೀಠದ ಅಧ್ಯಕ್ಷರಾದ ಪ್ರಭುದೇವರನ್ನಂತೂ ತೊಟ್ಟಿಲಿಗೆ ಹಾಕಿ ಜೋಗುಳವನ್ನು ಹಾಡಿದ್ದಾರೆ. ಶಿವನಾಮ ಮಹಿಮೆಯನ್ನು ಕೊಂಡಾಡಿದ ಸಿದ್ರಾಮಪ್ಪನವರು, ರಾಷ್ಟ್ರಭಕ್ತಿಯನ್ನು ಕೂಡ ಮೆರೆದಿದ್ದಾರೆ. 'ಬಂದಿದಾರೆ ಬಂದಿದಾರೆ' ಎಂಬ ದೇಶಭಕ್ತಿ ಹಾಡು ರಾಷ್ಟ್ರೀಯ ಏಕೀಕರಣದ ಕುರಿತಾಗಿದೆ’ ಎಂದಿದ್ದಾರೆ.
©2024 Book Brahma Private Limited.