ಬೌದ್ಧ ತಾತ್ವಿಕತೆಯ ಪ್ರಮುಖ ಪರಿಕಲ್ಪನೆಯಾದ ಮಧ್ಯಮಮಾರ್ಗದ ಸರಳ ನಿರೂಪಣೆಯೇ ಎಸ್. ನಟರಾಜ ಬೂದಾಳು ಅವರು ಬರೆದ ಕೃತಿ - ಬೌದ್ಧ ಮಧ್ಯಮಮಾರ್ಗ.ಬುದ್ಧಗುರು ತಿಳಿಸಿಕೊಟ್ಟ ಅರಿವಿನ ದಾರಿ ಎಲ್ಲರಿಗೂ ತೆರೆದಿದೆ. ಅದಕ್ಕೆ ಯಾವುದೇ
ನಿರ್ಬಂಧಗಳಿಲ್ಲ. ಅದು ನಿಸರ್ಗ ಸಹಜವಾಗಿ ಬದುಕುವ ಕ್ರಮ. ಅದರಲ್ಲಿ ಗುಟ್ಟಿನ ಸಂಗತಿಗಳಾಗಲೀ, ಕಠಿಣ ಸಂಗತಿಗಳಾಗಲೀ ಇಲ್ಲ. ಅದನ್ನು ವಿದ್ವಾಂಸರಿಂದಲೇ, ಪುಸ್ತಕಗಳಿಂದಲೇ ತಿಳಿಯಬೇಕಿಲ್ಲ. ಅದು ಯಾರಿಗೂ ಕೇಡು ಮಾಡದೆ ಬಾಳಬಯಸುವ ಎಲ್ಲರಿಗೂ ಹೊಳೆಯುವ ನಿಸರ್ಗವಿವೇಕ ಅದನ್ನು ಕಳೆದುಕೊಳ್ಳದೆ ಬಾಳಬೇಕು ಅಷ್ಟೆ. ಬೌದ್ಧ ತಾತ್ವಿಕತೆಯ ಪ್ರಮುಖ ನಿಲುವುಗಳಾದ ಅನಾತ್ಮ, ಅನಿತ್ಯ, ಪ್ರತೀತ್ಯ ಸಮುತ್ಪಾದ ಮತ್ತು ದುಃಖವನ್ನು ಕುರಿತಾದ ಎರಡು ಬರವಣಿಗೆಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಕೊಡಲಾಗಿದೆ. ಈ ಪದಗಳನ್ನು ಓದಿ ಗಾಬರಿಯಾಗುವ ಅಗತ್ಯವಿಲ್ಲ. ಲೋಕದಲ್ಲಿರುವ ಎಲ್ಲವೂ ಅನೇಕ ಅಂಶಗಳನ್ನು ಒಟ್ಟುಮಾಡುವುದರಿಂದ ಉಂಟಾಗಿವೆ ಎಂಬುದನ್ನು ಪ್ರತೀತ್ಯಸಮುತ್ಪಾದವೆಂದೂ ಹೀಗೆ ಉಂಟಾದ ಸಂಗತಿಗಳಲ್ಲಿ ಅದರದ್ದೇ ಆದ ಸ್ವಂತದ್ದು ಎನ್ನುವುದು ಏನೂ ಇರಲ್ಲ ಎನ್ನುವುದನ್ನು ಅನಾತ್ಮ ಎಂದೂ, ಎಲ್ಲವೂ ಯಾವಾಗಲೂ ಬದಲಾಗುತ್ತಲೇ ಇರುತ್ತದೆ ಎನ್ನುವುದನ್ನು ಅನಿತ್ಯ ಎಂದೂ ಸೂಚಿಸುತ್ತಾರೆ – ಇದು ಲೇಖಕರು ನೀಡುವ ಸರಳ ವಿವರಣೆಗಳು. ಇದು ಬೌದ್ಧ ಧರ್ಮ ಮತ್ತು ವಿಜ್ಞಾನಗಳು ಲೋಕವನ್ನು ನೋಡುವ ಕ್ರಮ. ವಿಜ್ಞಾನದ ಜೊತೆಗಿನ ನಿರಂತರವಾದ ಸಾಹಚರ್ಯ ಇರುವುದು ಬೌದ್ಧ ತಾತ್ವಿಕತೆಗೆ ಮಾತ್ರ ಎನ್ನುವುದು ಲೇಖಕರ ನಿಲುವು. ಮಧ್ಯಮಮಾರ್ಗಕವನ್ನು ಕನ್ನಡದ ಪರಿಭಾಷೆಯಲ್ಲಿ ಬಯಲು ಎಂದು ವಚನಕಾರರು ವಿವರಿಸಿಕೊಂಡಿದ್ದಾರೆ. ಲೋಕ ಸದಾ ಸೊನ್ನೆಯಾಗಿಯೇ ಇದ್ದರೂ ಅಗತ್ಯಕ್ಕೆ ತಕ್ಕಂತೆ ಯಾವಾಗ ಏನು ಬೇಕಾದರೂ ಆಗಿ ನೀಡಬಲ್ಲದು ಮತ್ತು ಮತ್ತೆ ಸೊನ್ನೆಯಾಗಿಯೇ ಇರಬಲ್ಲದು ಎಂದು ಸ್ಪಷ್ಟಪಡಿಸುತ್ತಾರೆ
©2024 Book Brahma Private Limited.