‘ಕೃಷ್ಣ ತರಂಗಿಣಿ’ ಕೃತಿಯು ಪದ್ಮಜಾ ಜೋಯ್ಸ್ ಅವರ ಕಾದಂಬರಿ. ಕೃತಿಗೆ ಬೆನ್ನುಡಿ ಬರೆದಿರುವ ಸೂರ್ಯಸಖ ಪ್ರಸಾದ್ ಅವರು, ಶ್ರೀ ಕೃಷ್ಣನ ಜೀವನ ಸಂದೇಶಗಳು ಸಾವಿರಾರು ವರ್ಷಗಳಿಂದ ನಮ್ಮನ್ನು ಪ್ರಭಾವಿತಗೊಳಿಸುತ್ತಿವೆ. ಅದೆಂದಿಗೂ ಪ್ರಸ್ತುತ ಅನ್ನೋದನ್ನು ಈ ಕಾದಂಬರಿ ಮತ್ತೊಮ್ಮೆ ನಿರೂಪಿಸುತ್ತಿದೆ. ಅವನ ಬಾಲ್ಯ, ಅವನ ಪ್ರೇಮ, ಅವನ ಕೌಶಲ್ಯ, ಜಾಣ್ಮೆ ತಂತ್ರಗಾರಿಕೆ, ಬದುಕಿನ ಪ್ರತೀ ಹೆಜ್ಜೆಗಳಲ್ಲಿರಲಿ ಎಂಬುದು ಎಲ್ಲರ ಆಶಯವಾಗಿದೆ. ಸಂಕಷ್ಟಗಳಲ್ಲಿ ಅವನ ಪ್ರಬುದ್ಧತೆ ನಮ್ಮೊಂದಿಗಿರಲೆಂಬ ಬಯಕೆಗಳೊಂದಿಗೆ ಅವನ ವೈರಾಗ್ಯ ಪ್ರವೃತ್ತಿ ಅಚ್ಚರಿಗೊಳಿಸುತ್ತದೆ. ಅವನು ದೇವರಾ, ಮಾನವನಾ, ಕಪಟಿಯಾ, ಧರ್ಮಿಷ್ಟನಾ, ಯೋಗಿಯ, ಭೋಗಿಯ ಅರಿವಾಗುವುದಿಲ್ಲ. ಸ್ನೇಹಿತನಾ, ಮಾರ್ಗದರ್ಶಕನಾ ಅಥವಾ ಜಗದ್ಗುರುವಾ ಪ್ರಶ್ನೆಯಾಗಿಯೇ ಕಾಡುತ್ತಾನೆ. ಒಮ್ಮೆ ಅರ್ಥವಾದರೆ ಇನ್ನೊಮ್ಮೆ ಭಾವಕ್ಕೂ ಭವಕ್ಕೂ, ಬುದ್ದಿಗೂ ಏಟುಕದೆ ಎಲ್ಲಕ್ಕೂ ಅತೀತವಾಗುತ್ತಾನೆ. ಈ ಕಾದಂಬರಿಯಲ್ಲಿ ಕೃಷ್ಣನೆಂಬ ಮೌಲಿಕ ವ್ಯಕ್ತಿತ್ವದ ಮಹಾ ಅನಾವರಣವಾಗಿದೆ. ಪೌರಾಣಿಕ ಕಥೆಗಳಲ್ಲಿ ಬರುವ ಕೃಷ್ಣನನ್ನು ಸಮಕಾಲೀನ ಮನಸ್ಥಿತಿಯಿಂದ ತಮ್ಮದೇ ಆದ ದೃಷ್ಟಿಕೋನದಿಂದ ಚಿತ್ರಿಸಿ ಕೃಷ್ಣನನ್ನು ಸಾರ್ವಕಾಲಿಕವಾಗಿ ಸಲ್ಲುವ ವ್ಯಕ್ತಿ ಎಂದು ಪದ್ಮಜಾ ಜೋಯ್ಸ್ ನಿರೂಪಿಸಿದ್ದಾರೆ. ಶ್ರೀಕೃಷ್ಣ ಏಕಕಾಲದಲ್ಲಿ ಸಾಮಾನ್ಯ-ಅಸಾಮಾನ್ಯ, ಲೌಕಿಕ-ಅಲೌಕಿಕನಾಗಿಯೂ, ಕಾಣಿಸಿಕೊಳ್ಳಬಲ್ಲವನು ಎಂಬುದು ಇಲ್ಲಿ ಸೊಗಸಾಗಿ ನಿರೂಪಿತವಾಗಿದೆ’ ಎಂದಿದ್ದಾರೆ.
©2024 Book Brahma Private Limited.