ತಾತ್ವಿಕರಲ್ಲಿ ಸಾಕ್ರೆಟಿಸ್ ನ ಹೆಸರು ಬಹಳ ದೊಡ್ಡದು. ಪಾಶ್ಚಿಮಾತ್ಯ ಚಿಂತನಾಲೋಕವನ್ನು ತನ್ನ ವಿಚಾರಗಳಿಂದ ಪ್ರಭಾವಿಸಿದವನು ಸಾಕ್ರೆಟಿಸ್. ಪುಸ್ತಕದ ಶೀರ್ಷಿಕೆಯೇ ಸೂಚಿಸುವಂತೆ ಗ್ರೀಕ್ ತತ್ವಜ್ಞಾನಿ ಸಾಕ್ರೆಟಿಸ್ ನ ಕೊನೆಯ ದಿನಗಳನ್ನು ಕುರಿತಾದ ಪುಸ್ತಕವಿದು. ಸಾಕ್ರಟಿಸ್ ನ ಕೊನೆಯ ದಿನಗಳಲ್ಲಿ ತನ್ನ ಸಹಚರರೊಂದಿಗೆ ನಡೆಸಿದ ಚರ್ಚೆ, ಮಾತು, ಸತ್ಯದ ಹುಡುಕಾಟ ಈ ಪುಸ್ತಕದಲ್ಲಿದೆ. ಸಾಕ್ರಟಿಸ್ ನ ವಿಚಾರಗಳನ್ನು ಪ್ಲೇಟೋ ಅಕ್ಷರಕ್ಕೆ ಇಳಿಸಿದ್ದಾನೆ. ಅದನ್ನು ಒಳಗೊಂಡ ಅಪರೂಪದ ಹಾಗೂ ಅಷ್ಟೇ ಮಹತ್ವದ ಪುಸ್ತಕವಿದು. ಸತ್ಯದ ಹುಡುಕಾಟ, ಪ್ರಶ್ನೆ ಕೇಳುವ, ಚರ್ಚೆಯ ಮೂಲಕವೇ ಸತ್ಯದ ಹುಡುಕಾಟ ಮಾಡಬಯಸುವ ಸಾಕ್ರೆಟಿಸ್ ತನ್ನ ವಿಚಾರಗಳಿಂದಾಗಿ ಪ್ರಭುತ್ವಕ್ಕೆ ಸವಾಲಾಗಿದ್ದವನು. ಪ್ರಶ್ನೆ ಕೇಳುವುದನ್ನು ಕಲಿಸುತ್ತಿದ್ದವನನ್ನೇ ಮಟ್ಟ ಹಾಕಲು ಪ್ರಭುತ್ವ ನಿರ್ಧರಿಸಿ ಯುವಜನಾಂಗದ ದಿಕ್ಕು ತಪ್ಪಿಸುತ್ತಿದ್ದಾನೆ ಎಂಬ ಆರೋಪ ಹೊರಿಸಿ ವಿಚಾರಣೆ ನಡೆಸಲಾಯಿತು. ವಿಚಾರಣೆಗೆ ಎದುರಾದ ಸಾಕ್ರೆಟಿಸ್ ತಾನು ಮಾಡುತ್ತಿರುವ ಕುರಿತು ಪಶ್ಚಾತ್ತಾಪ ಕೂಡ ವ್ಯಕ್ತಪಡಿಸಲಿಲ್ಲ. ಬಹುಮತದ ಆಧಾರದ ಮೇಲೆ ಸಾಕ್ರೆಟಿಸ್ ನಿಗೆ ಮರಣದಂಡನೆ ವಿಧಿಸಲಾಗುತ್ತದೆ. ಕೊನೆಯ ದಿನಗಳಲ್ಲಿ ಸೆರೆವಾಸದಲ್ಲಿ ಕಳೆಯುವ ಸಾಕ್ರೆಟಿಸ್ ಸತ್ಯದ ಹುಡುಕಾಟದ ದಾರಿಯಲ್ಲಿ ಎದುರಾಗುವ ಸವಾಲುಗಳಿಗೆ ಸಾಕ್ಷಿಯಾಗುತ್ತಾನೆ. ಸತ್ಯದ ಶೋಧನೆಯೇ ಅರಾಜಕತೆಯಂತೆ ಭಾಸವಾಗುತ್ತದೆ. ಸಾಕ್ರೆಟಿಸ್ ಹೆಮ್ಲಾಕ್ ವಿಷ ಕುಡಿಯುವುದರೊಂದಿಗೆ ತನ್ನ ಬದುಕಿಗೆ ಅಂತ್ಯ ಹಾಡುತ್ತಾನೆ.
©2024 Book Brahma Private Limited.