‘ಮಂಗರಸನ ಅರಮನೆಯ ಅಡುಗೆಗಳು’ ಕೃತಿಯು ಸತ್ಯನಾರಾಯಣ ಭಟ್ ಅವರ ಆಹಾರ ಕುರಿತ ಸಂಕಲನವಾಗಿದೆ. ಅಡಿಗೆಯನ್ನು ಕುರಿತ ಕನ್ನಡದ ಮೊದಲ ಸ್ವತಂತ್ರ ಕೃತಿ ’ಸೂಪಶಾಸ್ತ್ರ’ವನ್ನು ಮಂಗರಸನು ರಚಿಸಿದ್ದಾನೆ ಎನ್ನುವುದನ್ನು ನಾವು ತಿಳಿಯಬಹುದು. ಕೃತಿಯ ಎರಡನೇ ಪದ್ಯದಲ್ಲಿಯೇ ಸೂಪಶಾಸ್ತ್ರಕ್ಕನುಗುಣವಾಗಿ ಸರಸ್ವತಿಯನ್ನು ಹೀಗೆ ನೆನೆಯುತ್ತಾನೆ; ನವ ಕವೀಶ್ವರ ವಿಕಸಿತಾನನ ಘಟಂಗಳೊಳು ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು ತವೆ ಪಾಕಮಂ ಮಾಡಿ ರಸಿಕಜನಸಂತತಿಯ ಕಿವಿಗೆ ತೀವುವ ಭಾರತೀದೇವಿಯಂ ನೆನೆದು ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು ಹೊಸ ಕವೀಶ್ವರರ ನಗುವಿನಿಂದ ಬಿರಿದ ಮುಖಗಳೆಂಬ ಪಾತ್ರೆಗಳಲ್ಲಿ ನವರಸಗಳನ್ನು ಹಾಕಿ, ಚಾತುರ್ಯ, ದರ್ಶನ (ಶೋಭೆ) ಮೊದಲಾದ (ಕಾವ್ಯ) ಪರಿಕರಗಳೊಂದಿಗೆ ಕಲೆಸಿ, ಬಳಿಕ ಅವರ (ಹೊಸ ಕವೀಶ್ವರರ) ನಾಲಗೆಯೆಂಬ ಸೌಟಿನಿಂದ ತಿರುಗಿಸುತ್ತಾ, ಒಳ್ಳೆಯ ಅಡುಗೆಯನ್ನು (ಕಾವ್ಯವನ್ನು) ಮಾಡಿ (ಹೇಳಿಸಿ), ರಸಿಕ ಜನರ ಬಾಯಿಗೆ (ಕಿವಿಗೆ) ತುಂಬುವ ಭಾರತಿ(ಸರಸ್ವತಿ)ಯನ್ನು ಸ್ತುತಿಸಿ, ರುಚಿಯಿಂದ, ಷಡ್ರಸಗಳಿಂದ ಕೂಡಿದ ಪಾಕ ವಿಶೇಷಗಳನ್ನು ತಿಳಿದ ಮಟ್ಟಿಗೆ ಹೇಳುತ್ತೇನೆ ಎಂಬುದು ಮಂಗರಸನ ನಿವೇದನೆ. ಸರಸ್ವತಿಯನ್ನು (ಕಾವ್ಯವೆಂಬ) ಪಾಕಶಾಸ಼ಪ್ರವೀಣೆಯಾಗಿಸಿರುವುದು ಕವಿಯ ಚಮತ್ಕಾರವನ್ನು ತೋರಿಸುತ್ತದೆ. ಜೊತೆಗೆ ಸರಸ್ವತಿಗೆ ಹೊಸತೆರನಾದ ಆದರೆ ವಿಶೇಷವಾದ ಪಾತ್ರವನ್ನೂ ಕಲ್ಪಿಸುತ್ತದೆ. ಒಟ್ಟಾರೆಯಾಗಿ ಕೃತಿಯು ಮಂಗರಸನ ಅರಮನೆಯ ಅಡುಗೆಯ ವಿಚಾರವನ್ನು ತಿಳಿಸುತ್ತದೆ.
©2024 Book Brahma Private Limited.