’ಭಾರೀ ಬೊಂಬಾಟ್ ಭೋಜನ’ ಕೃತಿಯು ಸಿಹಿಕಹಿ ಚಂದ್ರು ಅವರ ಅಡುಗೆ ತಯಾರಿಕಾ ಖಾದ್ಯಗಳ ಲೇಖನ ಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ನಗೆ ಬರಹಗಾರ ಎಂ. ಎಸ್ ನರಸಿಂಹಮೂರ್ತಿ ‘ಸ್ಟಾರ್ ಸುವರ್ಣ ವಾಹಿನಿಯ 'ಬೊಂಬಾಟ್ ಭೋಜನ’ ಕಾರ್ಯಕ್ರಮಕ್ಕೆ ಸೆಲಬ್ರಿಟಿಯಾಗಿ ನನ್ನನ್ನು ಕರೆಸಿದ್ದರು. ನಿಮಗೇನು ಮಾಡಿ ಕೊಡಲಿ ಎಂದು ಅಡುಗೆಗಳ ಪಟ್ಟಿಯನ್ನೇ ಕೊಟ್ಟರು ಸಿಹಿಕಹಿ ಚಂದ್ರು. ಆಲೂ ಜಿಂಜರ್ ಫ್ರೆಡ್‌ರೈಸ್, ಟೂಟಿಫ್ಟ್ಟಿ ಬರ್ಫಿ, ಪನ್ನೀರ್ ಕ್ಯಾಪ್ಟಿಕಂ ಕರಾಮತ್ ಎಂದು ಗಾಬರಿ ಹುಟ್ಟಿಸುವ ವೆರೈಟಿ ತಿಂಡಿಗಳು ಹೇಳಿದರು. ಮೂರು ದಶಕಗಳ ಹಿಂದೆ ದೂರದರ್ಶನ ಇನ್ನೂ 'ಕಪ್ಪು, ಬಿಳುಪು' ಸ್ಥಿತಿಯಲ್ಲಿದ್ದಾಗಲೇ ಚಂದ್ರು ಹೊಸ ಅಡುಗೆಗಳನ್ನು ವೀಕ್ಷಕರಿಗೆ ಕಲಿಸಿದವರು. ಅಡುಗೆಯ ರಂಗದಲ್ಲಿ ಚಂದ್ರು ನಡೆಸುತ್ತಿರುವ ನಿರಂತರ ಪ್ರಯೋಗಗಳು ಹೊಸರುಚಿಗಳನ್ನು ಹುಟ್ಟು ಹಾಕುತ್ತಿವೆ. ಅವುಗಳನ್ನು ಮನೆಯಲ್ಲಿ ನಾವು ತಯಾರಿಸಲು ಸರಳವಾದ ರೆಸಿಪಿಗಳು ನೀಡಿದ್ದಾರೆ. ವೈಶಿಷ್ಟ್ಯತೆಗಳ ಪ್ರಯೋಗವನ್ನು ಸದಾಕಾಲ ಅಡುಗೆಗಳಿಗೆ ಮಾಡುವ ಇವರು, ಅನಾದಿಕಾಲದಿಂದ ಮಾಡುತ್ತಿರುವ ರಾಗಿಮುದ್ದೆಗೆ ಹೊಸ ರುಚಿ ನೀಡಿದರು’ ಎಂದಿದ್ದಾರೆ.
ಈ ಕೃತಿಯಲ್ಲಿರುವ 'ಸೋರೆಸುಂದರಿ', 'ಕುಚಿಕುಚಿ ಕೂಟು' 'ಚಮಕ್ ಟಿಮಕ್ ಟಮಾಟರ್ ಶೋರ' ಹೆಸರುಗಳು ಕೇಳುತ್ತಿರುವಂತೆಯೇ ಹಸಿವಿನ ಗ್ಲಾಂಡುಗಳು ಜಾಗೃತವಾಗಿ ತಿನ್ನಲು ಪ್ರಚೋದನೆ ನೀಡುತ್ತವೆ. ಡಾ.ಗೌರಿಯಮ್ಮ ಅವರ ಸಾಂಪ್ರದಾಯಿಕ ಅಡುಗೆ, ಆರೋಗ್ಯಕರ ಟಿಪ್ಸ್ ಈ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ. ಗಿಡಮೂಲಿಕೆಗಳಿಂದ, ಅಡುಗೆ ಮನೆಯಲ್ಲಿ ಲಭ್ಯವಿರುವ ಧನಿಯಾ, ಮೆಣಸು, ಶುಂಠಿ, ಜೀರಿಗೆ, ಅರಿಶಿನ ಮೊದಲಾದವುಗಳಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂಬುದರ ಬಗ್ಗೆ ಇಲ್ಲಿ ಸಲಹೆ ಮಾರ್ಗದರ್ಶನಗಳಿವೆ .
©2024 Book Brahma Private Limited.