ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಡಾ. ಖಾದರ್ ಅವರು ಸಿರಿಧಾನ್ಯಗಳು (ಅರ್ಕ, ಸಾಮೆ, ನವಣೆ, ಊದಲು, ಕೊರಲೆ) ಹಾಗೂ ಅವುಗಳ ಮಹತ್ವವನ್ನು ತಿಳಿಸಿದ್ದು, ಈ ಮಾಹಿತಿ ಕುರಿತು ಅವರು ಆಗಾಗ್ಗೆ ನೀಡಿದ ಉಪನ್ಯಾಸಗಳನ್ನು ಲೇಖಕಿ ಪಿ. ಚಂದ್ರಿಕಾ ಅವರು ನಿರೂಪಿಸಿದ್ದಾರೆ. ಈ ಸಿರಿಧಾನ್ಯಗಳನ್ನು ದೇಹದ ಆರೋಗ್ಯಕ್ಕೆ ಪುಷ್ಟಿ ನೀಡುತ್ತವೆ ಎಂಬ ಪರಂಪರಾಗತ ಜ್ಞಾನವನ್ನು ವಿಸ್ತರಿಸುವುದು ಈ ಕೃತಿಯ ಉದ್ದೇಶವೂ ಆಗಿದೆ.
ಹಸಿರು ಕ್ರಾಂತಿ ಎಂಬ ಮಾಯಾಮೃಗದ ಬೆನ್ನು ಹತ್ತಿದ್ದರಿಂದಾಗಿ ರೈತ ಮನೋರೋಗಿಯಾದ. ನೆಲದ ಜೀವಸತ್ವ ಹಾಳಾಯಿತು, ತಿನ್ನುವ ಅನ್ನ ವಿಷಮಯವಾಯಿತು, ನೆಲಮೂಲ ತಳಿಗಳ ಸಂತತಿ ನಾಶವಾಯಿತು. ಇದೆಲ್ಲದರ ಘೋರ ಪರಿಣಾಮ ಜೈವಿಕ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿರುವುದು. ಹೊಸ ಹೊಸ ರೋಗಗಳಿಗೆ ಮನುಷ್ಯ ಬಲಿಯಾಗುತ್ತಾ ಹೋದ. ಇದರ ಅರಿವು ಸರಕಾರಕ್ಕಾಗಲಿ, ರೈತನಿಗಾಗಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಆಗದೇ ಹೋಗಿರುವುದು ವಿಷಾದನೀಯ ಸಂಗತಿ.
ಡಾ. ಖಾದರ್ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧನೆಗೆ ತೊಡಗಿದ ವಿಜ್ಞಾನಿಯಾಗಿ ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು, ತಮ್ಮ ಸಂಶೋಧನೆಯ ಘೋರ ಪರಿಣಾಮ ಅರಿವಾಗುತ್ತಿದ್ದಂತೆ ಆ ಕೆಲಸ ಬಿಟ್ಟು ಜೈವಿಕ ಪದ್ಧತಿಯ ಕೃಷಿಜ್ಞಾನವನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸುವ ರೈತನಾಗಿ "ಯು ಟರ್ನ್" ಜೀವನ ನಡೆಸುತ್ತಿರುವವರು. ನೆಲಮೂಲ ತಳಿಗಳಾದ ಬರಗು, ಹಾರಕ, ನವಣೆ, ಸಾಮೆ, ಕೊರಲೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬೆಳೆಯುತ್ತಾ ಅವುಗಳಲ್ಲಿನ ಜೀವಸತ್ವದ ಅರಿವನ್ನು ಜನರಿಗೆ ಬೋಧಿಸುತ್ತಿದ್ದಾರೆ. ಸಿರಿಧಾನ್ಯಗಳ ವಿಶೇಷತೆಯ ಬಗ್ಗೆ, ಅವುಗಳ ಬಳಕೆಯ ಫಲಶ್ರುತಿಯ ಬಗ್ಗೆ ಡಾ. ಖಾದರ್ ಅವರ ಜ್ಞಾನ ಅಪಾರವಾದದ್ದು. ಇಂಥವರ ರಸಬಳ್ಳಿ ಹಬ್ಬಲಿ. ಜೈವಿಕ ಕೃಷಿಪದ್ಧತಿ ಜೀವಸಂವೃದ್ಧಿಯಿಂದ ಕಂಗೊಳಿಸಲಿ. ಇಂಥ ಅರಿವಿನ ಕೈಗನ್ನಡಿ ಈ ಪುಸ್ತಕ.
-ಎಸ್. ಜಿ. ಸಿದ್ಧರಾಮಯ್ಯ, ಕವಿ ಮತ್ತು ಜೈವಿಕ ಕೃಷಿಕ
©2024 Book Brahma Private Limited.