About the Author

ಡಾ.ಖಾದರ್ - ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಶಿಕ್ಷಣ ಹುಟ್ಟಿದೂರಿನಲ್ಲಿಯೇ. ಸ್ನಾತಕೋತ್ತರ ಪದವಿ ಮತ್ತು ಉನ್ನತ ಪದವಿ ಕರ್ನಾಟಕದಲ್ಲಿ. ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ. ಆನಂತರ ಅಮೆರಿಕದಲ್ಲಿ ಡುಪಾಂಟ್ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರಾಗಿ ಕೆಲಸ. ಅಮೆರಿಕದಲ್ಲಿ ಡಾ.ಖಾದರ್ ಪದವಿ, ಪ್ರಶಸ್ತಿ, ಸಂಪತ್ತುಗಳನ್ನು ಪಡೆದರೂ ಜೀವಮಾರಕ ರಾಸಾಯನಿಕಗಳ ಸಂಶೋಧನೆಯಿಂದ ಬೇಸತ್ತು ಮೈಸೂರಿಗೆ ಬಂದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಲು ಕಬಿನಿ ಜಲಾಶಯದ ದಿಬ್ಬದ ಮೇಲೆ ಬಂಜರು ಭೂಮಿಯನ್ನು ಖರೀದಿಸಿ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಅವರ ತಿಳುವಳಿಕೆ ಹೆಚ್ಚಿತು. ಇವರ ಎಂಟು ಎಕರೆ ಜಮೀನಿನಲ್ಲಿನ ಸುಸ್ಥಿರ ಬೇಸಾಯ ಹಲವು ರೈತರ ಪಾಲಿಗೆ ಸಂಶೋಧನಾ ಕ್ಷೇತ್ರವಾಯಿತು. 

ಸ್ವತಃ ಹೋಮಿಯೋಪತಿ ಚಿಕಿತ್ಸಾ ವಿಧಾನವನ್ನು ಕಲಿತು, ಹಲವರ ಖಾಯಿಲೆಗಳನ್ನು ಗುಣಪಡಿಸುವುದರ ಮೂಲಕವೂ ಜನಪ್ರಿಯವಾದರು. ಈಗಲೂ ವಾರದಲ್ಲಿ ಎರಡು ದಿನಗಳು ಹೆಚ್.ಡಿ.ಕೋಟೆಯ ಹತ್ತಿರದ ಬಿದರಹಳ್ಳಿ ಮತ್ತು ಸುತ್ತಮುತ್ತಲ ಹಳ್ಳಿಗಳ ಬಡ ಹಾಗೂ ಬುಡಕಟ್ಟು ಜನರಿಗೆ ಉಚಿತವಾಗಿ ಔಷಧೋಪಚಾರಗಳನ್ನು ನೀಡುತ್ತಿದ್ದಾರೆ. 

ಕರ್ನಾಟಕದಾದ್ಯಂತ ಹಲವಾರು ಸಭೆಗಳಲ್ಲಿ ಸಾರ್ವಜನಿಕರೊಡನೆ ಸಂವಾದ ನಡೆಸಿ ಸಿರಿಧಾನ್ಯಗಳು ಮತ್ತು ಸೊಪ್ಪು-ತರಕಾರಿ, ಹಣ್ಣುಗಳ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಬೇರೆ ಬೇರೆ ವಿಧಾನಗಳ ಕುರಿತು ಅರಿವು ಮೂಡಿಸುತ್ತಿದ್ದಾರೆ. ಹಲವು ಲೇಖನಗಳು, ಸಂದರ್ಶನಗಳು ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

2015 ರಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ಗ್ರಾಮೀಣ ಕುಟುಂಬ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಹಾಗೂ ಹಲವೆಡೆ ಮಾಡಿದ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. 

ಖಾದರ್