ಲೇಖ ಆರ್.ಡಿ. ಹೆಗಡೆ, ಆಲ್ಮನೆ ಅವರ ಕೃತಿ-ಉಪನಿಷತ್ತುಗಳ ಅರ್ಥಲೋಕ. ವೇದಗಳು ಐಹಿಕ ಭೋಗಭಾಗ್ಯಗಳನ್ನು ಒದಗಿಸುವ ಯಜ್ಞಯಾಗಾದಿಗಳ ಕರ್ಮಮಾರ್ಗವನ್ನು ಬೋಧಿಸಿದರೆ, ಉಪನಿಷತ್ತುಗಳು ಆತ್ಯಂತಿಕ ಸತ್ಯವನ್ನು ಅಂದರೆ, ಯಾವುದರಿಂದ ಮಾನವನು ಐಹಿಕ ಬಂಧನದಿಂದ ಬಿಡುಗಡೆ ಪಡೆಯಬಹುದೋ ಅಂತಹ ದಿವ್ಯಜ್ಞಾನವನ್ನು ನೀಡುತ್ತವೆ. ಉಪನಿಷತ್ತುಗಳ ಪ್ರಮುಖ ವ್ಯಾಖ್ಯಾನಕಾರರಾದ ಶಂಕರಾಚಾರ್ಯರ ಪ್ರಕಾರ ಯಾರು ವೈದಿಕ ಕರ್ಮಮಾರ್ಗದಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿರುವರೋ, ಯಾರು ಐಹಿಕ ಅಥವಾ ಸ್ವರ್ಗಲೋಕದ ಸುಖಸಂಪತ್ತುಗಳ ಆಶೆಯನ್ನು ದಾಟಿರುವರೋ, ಅಂತಹ ಉನ್ನತ ಹಂತದ ಮಾನವರಿಗೆ ಮಾತ್ರ ಉಪನಿಷತ್ತುಗಳು ಹಿಡಿಸುತ್ತವೆ ಎಂಬುದು. ಲೇಖಕ ಆರ್.ಡಿ.ಹೆಗಡೆಯವರು ಈ ಪುಸ್ತಕದಲ್ಲಿ ವೇದಾಂತದ ಪಾರಿಭಾಷಿಕ ಪದಜಾಲವನ್ನು ಬಳಸದೆ ತಮ್ಮದೇ ಆದ ಓದಿನಿಂದ ತಮ್ಮದೇ ಆದ ಭಾಷೆಯನ್ನು ಬಳಸಿರುವುದು ಈ ಕೃತಿಯ ಒಂದು ವೈಶಿಷ್ಟ್ಯವಾಗಿದೆ. ಅಲ್ಲದೆ, ತಾವು ಆರಿಸಿಕೊಂಡ ಉಪನಿಷತ್ತುಗಳಲ್ಲಿ ಎಲ್ಲೆಲ್ಲಿ ಜೀವಪರವಾದ ಹಾಗೂ ಜೀವವಿರೋಧಿಯಾದ ನಿಲುವುಗಳು ಒಡಮೂಡಿವೆ ಮತ್ತು ಅವುಗಳಿಂದ ವ್ಯಕ್ತಿಯ ಹಾಗೂ ಸಮಾಜದ ಜೀವನದ ಮೇಲೆ ಆಗುವ ಪರಿಣಾಮಗಳು ಯಾವ ಬಗೆಯವು ಎಂಬ ವಿಶ್ಲೇಷಣೆಯೂ ಇದೆ.
©2024 Book Brahma Private Limited.