‘ಪ್ರಾಚೀನ ಭಾರತೀಯ ತತ್ವ ದರ್ಶನಗಳು : ಒಂದು ಸಮೀಕ್ಷೆ’ ಲೇಖಕ ಉದಯ ಕುಮಾರ ಹಬ್ಬು ಅವರ ಕೃತಿ. ಡಾ ಜಿ ಬಿ ಹರೀಶ್ ಅವರು ಈ ಕೃತಿಗೆ ಮುನ್ನುಡಿ ಬರೆದು ‘ನಮ್ಮ ಕಾಲಕ್ಕೆ ವಾದಭೂಮಿಕೆಯೊಂದು ಬೇಕಾಗಿದೆ. ಅದನ್ನು ಭಾರತೀಯ ತತ್ವ ಮತ್ತು ಅನ್ಯ ದರ್ಶನಗಳು ಒದಗಿಸುತ್ತವೆ. ನನ್ನ ಮನಸ್ಸಿನಲ್ಲಿ ಅರಿಸ್ಟಾಟಲ್,ಕಾಂಟ್, ರಸೆಲ್ ಗಿಂತ ಹೆರಕ್ಲಿಟಸ್,ತಾವೊ, ಬೋಧಿಧರ್ಮ, ನಾಗಾರ್ಜುನ, ಕುಂದಕುಂದ, ಸುರೇಶ್ವರ, ಆನಂದ ಕುಮಾರಸ್ವಾಮಿ, ಟ್ಯಾಗೋರ್, ಗಾಂಧಿ, ಬಿಮಲ್ ಕೃಷ್ಣ ಮೋತಿಲಾಲ್, ಹೆನ್ರಿಕ್ ಜಿಮ್ಮರ್ ಅವರ ಚಿತ್ರಗಳು ಮೂಡುತ್ತಿವೆ. ನಮ್ಮ ದೇಶದ ಸಾರ್ವಜನಿಕ ಚರ್ಚೆಯ ಬುನಾದಿಗೂ ದರ್ಶನ ಪ್ರಪಂಚಕ್ಕೂ, ನಿತ್ಯದ ಆಗು ಹೋಗುಗಳಿಗೂ ಹೊಕ್ಕಳು ಬಳ್ಳಿ ಸಂಬಂಧ ಇದ್ದುದನ್ನು ತೋರಿಸುತ್ತದೆ. ಆದರೆ ಈಗ? ವಿಶ್ವವಿದ್ಯಾನಿಲಯಗಳಲ್ಲಿ ತತ್ವ ಶಾಸ್ತ್ರದ ಅಧ್ಯಯನ, ಬೋಧನೆಯ ಮಟ್ಟ ಕುಸಿದಿದೆ. ಅದಕ್ಕೆ ಪೂರಕವಾಗಿ ಬೇಕಾದ ಸಂಸ್ಕೃತ- ಪ್ರಾಕೃತ- ಹಳಗನ್ನಡಗಳ ಇವುಗಳ ಅಧ್ಯಯನವೂ ಸುಸ್ಥಿತಿಯಲ್ಲಿ ಇಲ್ಲ. ಅಂದರೆ ಒಂದು ಕಡೆ ಸಮಾಜಕ್ಕೆ ನಮ್ಮ ಪ್ರಾಚೀನ, ಅರ್ವಾಚೀನ ದರ್ಶನಗಳು, ದಾರ್ಶನಿಕರನ್ನು ಅರ್ಥಮಾಡಿಕೊಳ್ಳುವ ಹಂಬಲವಿದೆ. ಆದರೆ ಅದನ್ನು ಪೂರೈಸಬೇಕಾದ ಕೇಂದ್ರಗಳು ದಣಿದಿವೆ. ಈ ಹಿನ್ನೆಲೆಯಿಂದಲೂ ಹಬ್ಬು ಅವರ ಕೆಲಸದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.