ಸ್ವಾಮಿ ಶಿವಾತ್ಮಾನಂದ ಪುರಿ ಅವರು ರಚಿಸಿದ ಕೃತಿ-ಮಹಾಸಮಷ್ಟಿಭಾವ. ಅಧ್ಯಾತ್ಮ ಸಾಧನೆಯ ಭಾವವಿಸ್ತಾರ ಎಂಬುದು ಕೃತಿಯ ಉಪಶೀರ್ಷಿಕೆ. ಸ್ವಾಧ್ಯಾಯದಲ್ಲಿ ಮೊದಲು ಕಂಡ ಮಹಾಸಮಷ್ಟಿಭಾವ ವಿಚಾರವು ಮುಂದೆ ಹಲರೊಂದಿಗೆ ನಡೆಸಿರುವ ಸತ್ಸಂಗದ ಮಾತುಕತೆಗಳು; ಎಂದೋ ಎಲ್ಲಿಯೋ ಕೇಳಿದ ಘಟನೆಗಳು, ಲೋಕಯಾತ್ರೆಯಲ್ಲಿ ದರ್ಶಿಸಿರುವ ಕ್ಷೇತ್ರಗಳ ದರ್ಶನಾನುಭವ ಮೊದಲಾಗಿ ಶ್ರೀಗುರುಕರುಣೆಯಿಂದ ಸಾಗುತ್ತಿರುವ ಅಂತರಂಗದ ಅಧ್ಯಾತ್ಮ ಸಾಧನೆಯೊಂದಿಗೆ ‘ಮಹಾಸಮಷ್ಟಿಭಾವ’ವು ವಿಸ್ತಾರಗೊಂಡಿದೆ; ಭಾವಸ್ಪಂದದ ಈ ವಿಸ್ತಾರಕ್ಕೆ ಬಹಿರ್ಲೋಕದ ಸ್ಪಂದಶಕ್ತಿಯೂ ಕೂಡಿ ಈ ಭಾವಕೃತಿ ಸಿದ್ಧಗೊಂಡಿದೆ. ಸಂಸ್ಕೃತವು ಅಧ್ಯಾತ್ಮಿಕ ನೆಲೆಗಟ್ಟಿನ ಭಾಷೆ, ವ್ಯಷ್ಟಿ, ಸಮಷ್ಟಿ ಹಾಗೂ ಮಹಾಸಮಷ್ಟಿಭಾವವು ಅಧ್ಯಾತ್ಮ ಮಾರ್ಗದ ಸಾಧಕನ ಅಂತರಂಗದ ಭಾವನೆಲೆಯನ್ನು ಆಧರಿಸಿದೆ. ವೇದಗಳಲ್ಲಿನ ವಿಚಾರಗಳು ಉಪನಿಷತ್ ಗಳಲ್ಲಿ ಜಗತ್ತಿನಲ್ಲಿ ಪ್ರಚುರಗೊಂಡು ಭಾರತೀಯ ಅಧ್ಯಾತ್ಮದ ಅಂತಸ್ರೋತ್ರವನ್ನು ಹರಿಸುತ್ತಿವೆ. ಮಹಾಸಮಷ್ಟಿಭಾವ ಎನ್ನುವುದು ಮೂಲತಃ ಋುಷಿ ಪರಂಪರೆಯ ವೇದೋಪನಿಷತ್ಗಳಿಂದ ಹೊಮ್ಮಿರುವಂಥದ್ದು. ವ್ಯಷಿ-ಸಮಷ್ಟಿ ಪದಗಳು ಅಧ್ಯಾತ್ಮ ಮೂಲದಿಂದ ಸಾಮಾಜಿಕ ನೆಲೆಗಟ್ಟಿಗೆ ಅಳವಡುವಂತೆ ಮೇಲುಸ್ತರದಲ್ಲಿಯೇ ಬಳಕೆಗೊಳ್ಳುತ್ತಿವೆ. ಮಹಾಸಮಷ್ಟಿಭಾವವು ಬುದ್ಧಿಯ ವಿಚಾರವಲ್ಲ; ಹೃದಯಮಿಡಿತದ ಭಾವ.ಈ ಮಹಾಸಮಷ್ಟಿಭಾವ ಕುವೆಂಪು ಅವರ ಹಲವಾರು ಕವಿತೆಗಳಲ್ಲಿ ಹೊರಬಂದಿರುವುದನ್ನು ಬಹಳ ಸುಂದರವಾಗಿ ಎತ್ತಿ ತೋರಿಸಿದ್ದಾರೆ.
©2024 Book Brahma Private Limited.