ಡಿ.ಎಸ್.ನಾಗಭೂಷಣ ಅವರ ಸಮಾಜವಾದಿ ಸಂಕಥನಗಳ ಸಂಗ್ರಹ ಬೇರು ಬಿಳಲು. ಕೃತಿಯಲ್ಲಿ ಬಂಜಗೆರೆ ಜಯಪ್ರಕಾಶ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕನ್ನಡದ ಬಹುಮುಖ್ಯ ಚಿಂತಕರಲ್ಲೊಬ್ಬರಾದ ಡಿ.ಎಸ್. ನಾಗಭೂಷಣ ಅವರ 'ಬೇರು- ಬಳಲು ಎಂಬ ಸಮಾಜವಾದಿ ಸಂಕಥನಗಳ ಈ ಸಂಗ್ರಹ ನಮ್ಮ ವರ್ತಮಾನದ ಹಲವಾರು ಸಂದಿಗ್ಧತೆಗಳಿಗೆ ತನ್ನ ಆಲೋಚನೆಯ ಕನ್ನಡಿ ಹಿಡಿದಿದೆ. ಆ ಕನ್ನಡಿ ಸಿದ್ಧಾಂತಗಳ ಸೋಗಲಾಡಿ ಪರದೆಗಳ ಹಿಂದೆ ಅವಿಸಿಟ್ಟ ವಾಸ್ತವತೆಯ ಮುಖದ ಸುಕ್ಕುಗಳನ್ನೂ ಬಿಂಬಿಸುವಷ್ಟು ಪರಿಶುಭ್ರವಾಗಿದೆ. ಡಿ.ಎಸ್. ನಾಗಭೂಷಣ ಜನಪ್ರಿಯ ಮಾದರಿಗಳಿಗಿಂತ ಭಿನ್ನವಾಗಿ ಚಿಂತಿಸಬಲ್ಲರು. ವ್ಯಕ್ತಿ ಮುಲಾಜುಗಳನ್ನು ಮೀರಿದ ನಿಷ್ಠುರ ಸತ್ಯಾನ್ವೇಷಣೆ ಅವರ ಗುರಿ, ಖಚಿತವಾಗಿ, ವಸ್ತುನಿಷ್ಠವಾಗಿ, ತಮಗಿರುವ ಬಹುಶಾಸ್ತ್ರ ಅಧ್ಯಯನದ ತಿಳಿವಳಿಕೆಯೊಂದಿಗೆ ಅವರು ಮಂಡಿಸುವ ವಿಚಾರ ತಮ್ಮ ನಂಬುಗೆಯ ಆಳದಿಂದ ಹೊಮ್ಮಿರುತ್ತದೆ. ಸೈದ್ಧಾಂತಿಕವಾಗಿ ಜಗಳವಾಡುತ್ತಲೂ ಅವರೊಂದಿಗೆ ಸ್ನೇಹದಿಂದಿರಬಹುದು ಆದರೆ ರಾಜಿಕಬೂಲಿಗಳಿಲ್ಲ. ಒಂದು ನೈತಿಕವಾದಿ ಸಾಕ್ಷಿ ಪ್ರಜ್ಞೆಯಂತೆ ಸಾಹಿತ್ಯ ಮತ್ತು ಸಮಾಜ, ರಾಜಕಾರಣ ಹಾಗೂ ಜಾಗತೀಕರಣ ಅಥವಾ ಜಾತಿ ವ್ಯವಸ್ಥೆಯ ವ್ಯಾಕರಣ ಈ ಎಲ್ಲದರ ಬಗ್ಗೆ ನಾಗಭೂಷಣ ತಮ್ಮ ಒಳನೋಟಗಳ ವಿಶ್ಲೇಷಣೆಯನ್ನು ಸಮತೋಲನ ತಪ್ಪದೆ ಮಾಡುತ್ತಾರೆ. ಇದರ ಹಿನ್ನೆಲೆಯಲ್ಲಿ ಅವರೊಳಗಿರುವ ಸಾಮಾಜಿಕ ಕಾರ್ಯಕರ್ತನೊಬ್ಬನ ನಿಜವಾದ ಕಕ್ಕುಲಾತಿ, ವಿದ್ವಾಂಸನೊಬ್ಬನ ಬಹುಮುಖ ಅವಧಾರಣೆ, ಸರ್ವರ ಹಿತಚಿಂತನೆಯ ಜೀವಪರ ಧೋರಣೆ ಬಹಳ ಮುಖ್ಯ. ಅತ್ಯಂತ ಕ್ರಿಯಾಶೀಲವಾಗಿ ಸ್ಪಂದಿಸುತ್ತ ಪ್ರಜಾತಾಂತ್ರಿಕ ಮೌಲ್ಯಗಳನುಸಾರ ಎಲ್ಲರೊಂದಿಗೆ ಬೌದ್ಧಿಕ ವಾಗ್ವಾದಗಳನ್ನು ನಡೆಸುತ್ತ, ಸಾಹಿತ್ಯ- ಸಾಂಸ್ಕೃತಿಕ ರಂಗಗಳಲ್ಲಿ ಸದಭಿರುಚಿಯ ವಾತಾವರಣ ಕಾಪಾಡಲು ಶ್ರಮಿಸುತ್ತ, ವರ್ತಮಾನದ ಆರೋಗ್ಯವನ್ನು ಸರಿಪಡಿಸಲು ಹೆಣಗುತ್ತ, ಸಿಟ್ಟುಗೊಳ್ಳುತ್ತಾ...ಒಂದು ರೀತಿಯಲ್ಲಿ ಅವರು ಶಿವರಾಮ ಕಾರಂತರ ಕಾಳಜಿಗಳ ಸದ್ಯದ ಮಾದರಿಯಂತೆ ನನಗೆ ಕಾಣುತ್ತಾರೆ. ಹಾಗಾಗಿಯೇ ನನಗೆ ಡಿ.ಎಸ್. ನಾಗಭೂಷಣ ಎಂಬ ಹೆಸರು ನಮ್ಮ ಸಮಕಾಲೀನ ಸಹವಾಸಗಳ ನಡುವಿನ ಅತ್ಯಂತ ಪ್ರೀತಿಪಾತ್ರವಾದ ಕ್ರಿಯಾಪದ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.