ನಮ್ಮ ಶಿಡ್ಲಘಟ್ಟ-ಎಂಬುದು ತಮ್ಮ ಊರನ್ನು ದಾಖಲಿಸುವ ಪ್ರಯತ್ನವಾಗಿ ಲೇಖಕ ಡಿ.ಜಿ. ಮಲ್ಲಿಕಾರ್ಜುನ ಅವರು ರಚಿಸಿದ ಕೃತಿ ಇದು. ಕುತೂಹಲ, ಬೆರಗು, ಸೋಜಿಗದ ದೃಷ್ಟಿಯಿದ್ದರೆ ಪ್ರತಿಯೊಂದು ಸ್ಥಳವೂ ಅನೇಕ ಕತೆ ಹೇಳುತ್ತವೆ. ನಮ್ಮ ಊರಿನ ಬಗ್ಗೆ, ನಮ್ಮ ಸುತ್ತಲಿನ ಜನರ ಬಗ್ಗೆ ಕುತೂಹಲದ ಕಣ್ಣಿರದಿದ್ದರೆ, ಯಾವ ದೇಶದ ಯಾವ ಸ್ಥಳ ನೋಡಿಬಂದರೂ ‘ನಾನೂ ಹೋಗಿ ಬಂದೆ’ ಎಂದಾಗುತ್ತದೆಯೇ ವಿನಃ ಬೇರೇನೂ ಪ್ರಯೋಜನವಾಗಿರುವುದಿಲ್ಲ.
ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಶಿಡ್ಲಘಟ್ಟ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಶಿಡ್ಲಘಟ್ಟ ಕುರಿತಾದ ನೂರೆಂಟು ಸಂಗತಿಗಳಲ್ಲಿ ಹಲವನ್ನು ಕ್ರೋಡಿಕರಿಸಿ ಪುಸ್ತಕವನ್ನಾಗಿಸುವ ಪ್ರಯತ್ನವಿದು. ಶಿಡ್ಲಘಟ್ಟದ ವಿಶೇಷಗಳು, ಸಾಧಕರು, ಸ್ಥಳಗಳು, ಶಾಸನಗಳು, ಜೀವವೈವಿಧ್ಯ ಮುಂತಾದವುಗಳನ್ನು ಕನ್ನಡಿಗರಿಗೆ ಪರಿಚಯಿಸುವ ಸದುದ್ದೇಶದಿಂದ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಐತಿಹಾಸಿಕ ಮೆರಗು ಪಡೆದಿದೆ.
ಇದು ನಮ್ಮ ಊರು ಎಂಬ ಹೆಮ್ಮೆ, ಅಭಿಮಾನ ಮಲ್ಲಿಕಾರ್ಜುನರಿಂದ ಇಷ್ಟು ವಿವರವಾದ ಪುಸ್ತಕವನ್ನು ಬರೆಸಿಕೊಂಡಿದೆ. ಈ ಗೆಳೆಯನ ಕಣ್ಣಿಗೆ ಸಾಮಾನ್ಯವಾದದೂ ಮುಖ್ಯವಾಗಿ ಕಾಣುತ್ತದೆ. ಹಾಗಾಗಿ ಅದಕ್ಕೂ ಪುಟದ ಮೀಸಲು. ಚಿಕ್ಕದು ಎಂದು ಬಿಡದೆ ದಾಖಲಿಸಬೇಕೆಂಬ ಹಂಬಲಿಗ ಮಲ್ಲಿಕಾರ್ಜುನ. ಹಾಗಾಗಿ ಸಿಕ್ಕಿದ್ದನ್ನು ಹೃದಯದಲ್ಲಿ ಬಾಚಿ ಅಕ್ಷರಗಳಲ್ಲಿ ಸುರಿದಿದ್ದಾರೆ. ಹೀಗೆ ಸುರಿಯುವಾಗ ನಿರೂಪಣೆಯಲ್ಲಿ ಪತ್ರಕರ್ತನ ವರದಿಯ ಗುಣ, ಲೇಖನದ ಲಕ್ಷಣ, ಗದ್ಯದ ಸರಳ ಶೈಲಿಯಲ್ಲಿ ಬರಹಗಳು ಮೂಡಿವೆ.
ಛಾಯಾಚಿತ್ರಕಾರನಾಗಿ ಹೆಸರು ಮಾಡಿರುವ ಈತ ಕ್ಯಾಮೆರಾ ಕಣ್ಣನ್ನು ಬಳಸಿಕೊಂಡು ಸಚಿತ್ರ ಲೇಖನಗಳನ್ನಾಗಿ ಮಾಡಿರುವುದು ಗಮನಾರ್ಹ ಅಂಶ. ಚಿತ್ರಗಳು ನುಡಿಗೆ ಸಾಕ್ಷಿಗಳಾಗುತ್ತವೆ. ನುಡಿ-ಚಿತ್ರಗಳಿಂದ ಸಿಂಗಾರಗೊಂಡ ’ಜ್ಞಾಪಕ ಚಿತ್ರಶಾಲೆ’ ಎಂದರೆ ಇದಕ್ಕೊಂದು ಪೂರ್ಣಾರ್ಥ ಸಿಗುತ್ತದೆ. ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಒಡಲೊಳಗೆ ಇಷ್ಟೊಂದು ಸಿರಿವಂತಿಕೆ ಉಂಟೆ ಎಂಬ ಬೆರಗು ಮೂಡಿಸುವ ಈ ಕೃತಿ ಅನೇಕ ವಿಷಯಗಳ ದಾಖಲೆಯಿಂದಾಗಿ ಸಂಶೋಧನೆಗಳಿಗೆ ಕೈಪಿಡಿಯಾಗುವುದಲ್ಲದೆ, ಪ್ರಾಥಮಿಕ ಮಾಹಿತಿಯನ್ನೂ ಒದಗಿಸುತ್ತದೆ.
ಪ್ರೀತಿಯಿಲ್ಲದೆ ಏನೂ ಮಾಡಲಾಗದು. ಮಲ್ಲಿಕಾರ್ಜುನರಲ್ಲಿ ಅದು ಧಾರಾಳವಾಗಿದೆ. ಅದರಿಂದಲೇ ಈ ಕೃತಿ ಮೂಡಿದೆ. ವ್ಯಾಪಕ ಕ್ಷೇತ್ರ ಸಂಚಾರದ ಫಲ ಈ ಕೃತಿ. ಇದನ್ನು ’ತಾಲ್ಲೂಕು ದರ್ಶನ’ವೆಂದಷ್ಟೇ ಪರಿಗಣಿಸಲಾಗದು. ಏಕೆಂದರೆ ಅಂಥ ಕೃತಿಗಳಿಗಿಂತ ಸಾಕಷ್ಟು ಭಿನ್ನವಾಗಿದೆ, ಇದು. ಜನಜೀವನ, ಸಸ್ಯ-ಪ್ರಾಣಿ ಪರಿಸರ, ಗತ ಹಾಗೂ ವರ್ತಮಾನದ ಚಹರೆಗಳನ್ನು ಬಿಡಿಸಿರುವ ಈ ಕೃತಿ, ಕಾಲ, ಕಾರ್ಯ, ಕಾರಣಗಳತ್ತಲೂ ಗಮನ ಸೆಳೆಯುತ್ತದೆ.
-ಸ.ರಘುನಾಥ, ಸಾಹಿತಿ, ಶ್ರೀನಿವಾಸಪುರ
©2024 Book Brahma Private Limited.