"ದಟ್ಸ್ ಕನ್ನಡ ಡಾಟ್ ಕಾಮ್ ನಲ್ಲಿ ಪ್ರಕಟವಾದ ವಿಚಿತ್ರಾನ್ನ ಹೆಸರಿನ ಸಾಪ್ತಾಹಿಕ ಅಂಕಣದ ಆಯ್ದ ಲೇಖನಗಳ ಸಂಗ್ರಹವೇ ಇನ್ನೊಂದಿಷ್ಟು ವಿಚಿತ್ರಾನ್ನ ಪುಸ್ತಕ. ತಮ್ಮ ಲೇಖನಗಳಿಗೆಆಯ್ದುಕೊಳ್ಳುವ ವಿಷಯ ವಸ್ತುಗಳ ವೈವಿಧ್ಯ, ಆರಂಭಿಕ ಹಂತದಲ್ಲೇ ಓದುಗರ ಮನಸ್ಸನ್ನು ಹೈಜಾಕ್ ಮಾಡುತ್ತದೆ. ಕೊನೆತನಕ ಸಲೀಸಾಗಿ ಓದಿಸಿ ಅನುಪಮ ಆನಂದಕ್ಕೆ, ಹದವಾದ ಹಿತಾನುಭವಕ್ಕೆ ಕಾರಣವಾಗುತ್ತದೆ. ಓದುಗರನ್ನು ನಕ್ಕುನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಪುಲವಾಗಿ ಕಾಣಿಸುತ್ತವೆ. ನವಿರಾದ ಹಾಸ್ಯಮಿಶ್ರಿತ ಸರಳ ಭಾಷೆಯ ಶೈಲಿ ಮತ್ತು ದೈನಂದಿನ ಆಗುಹೋಗುಗಳಲ್ಲಿ ಹಾಸುಹೊಕ್ಕಾಗಿರುವ ಸಂಗತಿಗಳಲ್ಲೇ ಸ್ವಾರಸ್ಯವನ್ನು ಹುಡುಕಿ ತೋರಿಸುವ ಪರಿಯಿಂದಾಗಿ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಎಷ್ಟೋ ಸರ್ತಿ ಲೇಖನದ ತಲೆಬರಹವೇ ಓದುವಂತೆ ಪ್ರೇರೇಪಿಸುತ್ತದೆ. ಮಾಹಿತಿ ಮನರಂಜನೆ ಮತ್ತು ವಿಷಯಸಂಗ್ರಹ ವಿತರಣೆ ಕುರಿತಂತೆ ವಿನೂತನ ಪ್ರಯೋಗಗಳನ್ನು ಮಾಡುವಲ್ಲಿ ಆಸಕ್ತರಾದ ಶ್ರೀವತ್ಸ ಜೋಶಿ ಸಮಾನಮನಸ್ಕರೊಡನೆ ಅದರ ವಿನಿಮಯ ಮಾಡಿಕೊಳ್ಳುವುದರಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಅಂಕಣ ಬರಹಗಳಲ್ಲಿಯೂ ಒಂದು ವಿನೂತನ ಪ್ರಯೋಗ, ಮೈಲಿಗಲ್ಲು ಎಂದೇ ಗುರುತಿಸಲ್ಪಟ್ಟಿರುವ ಜೋಶಿಯವರ ಬರವಣಿಗೆ ಅವರಿಂದ ನಿರೀಕ್ಷಿಸಬಹುದಾದ ಇನ್ನೂ ಉತ್ತಮ, ಉಪಯುಕ್ತ, ಮೌಲಿಕ ಕೃತಿಗಳ ಮುನ್ನೋಟದಂತಿದೆ."
©2024 Book Brahma Private Limited.