ಚಿತ್ರಗಳು ಪತ್ರಗಳು ಪುಸ್ತಕದ ಹೆಸರೇ ಸೂಚಿಸುವ ಹಾಗೆ ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಹಿರಿಯರ ಗೆಳೆಯರ ವ್ಯಕ್ತಿಚಿತ್ರಗಳಿದ್ದರೆ, ಎರಡನೆಯ ಭಾಗದಲ್ಲಿ ಮೂರ್ತಿರಾಯರು ತಮ್ಮ ಗೆಳೆಯ ತೀ. ನಂ. ಶ್ರೀಕಂಠಯ್ಯನವರಿಗೆ, ಮಗ ಸುಬ್ಬರಾಮಯ್ಯನವರಿಗೆ ಹಾಗೂ ಸೊಸೆ ನ್ಯಾನ್ಸಿ ನಾಗರಾಜ್ ಅವರಿಗೆ ಬರೆದ ಪತ್ರಗಳಿವೆ. ಈ ಎರಡೂ ಭಾಗಗಳೂ ಒಂದಕ್ಕೊಂದು ಪೂರಕವೆಂದು ಹೇಳಲು ಮೂರ್ತಿರಾಯರು ನೀಡುವ ವಿವರಣೆ : `ವಾಸ್ತವವಾಗಿ ಮೊದಲು ಭಾಗದ ಚಿತ್ರಗಳನ್ನು ಬರೆಯಬೇಕೆನ್ನಿಸಿದ್ದು ಎರಡನೆಯ ಭಾಗದ ಪತ್ರಗಳನ್ನು ಓದಿದ ಮೇಲೆ, ಈ ಪತ್ರಗಳು ನನ್ನ ಕೈಗೆ ಬರದಿದ್ದರೆ ಅವನ್ನು ಓದಿ ಹಳೆಯ ಕಾಲದ ನೆನಪುಗಳು ಎಚ್ಚರಗೊಳ್ಳದಿದ್ದರೆ ಮೊದಲ ಭಾಗದ ಚಿತ್ರಗಳನ್ನು ಬರೆಯುವ ಯೋಚನೆಯೇ ಬರುತ್ತಿರಲಿಲ್ಲ.' ಮೂರ್ತಿರಾಯರ ಈ ವಿವರಣೆಯನ್ನು ನಾವು ಮರೆತರೂ ಎರಡೂ ಭಾಗಗಳಲ್ಲಿ ಒಂದೇ 'ಸಾಂಸ್ಕೃತಿಕ ಪರಿಸರ'ದ ಚಿತ್ರಣವಿರುವುದರಿಂದ ಒಂದು ಸಾಮಾನ್ಯ ನೆಲೆಯ ಹಿನ್ನಲೆಯಲ್ಲಿ ಚಿತ್ರಗಳು ಪತ್ರಗಳು ಪರಸ್ಪರ ಪೂರಕವಾಗಿವೆಯೆನ್ನಿಸುತ್ತದೆ.
ಮೊದಲ ಭಾಗದಲ್ಲಿ ಮೂರ್ತಿರಾಯರು ತಾವು ನಿಕಟವಾಗಿ ಕಂಡ ಹತ್ತು ಜನ ಮಹನೀಯರ ವ್ಯಕ್ತಿತ್ವವನ್ನು ಚಿತ್ರಿಸುವುದರ ಜೊತೆಗೆ ಆಕಾಶವಾಣಿ ಹಾಗೂ ಸಂಸ್ಕೃತಿ ಪ್ರಸಾರ ಇಲಾಖೆಯ ಬಗೆಗಿನ ಎರಡು ಲೇಖನಗಳನ್ನೂ ಸೇರಿಸಿದ್ದಾರೆ. ಆ ಲೇಖನಗಳಲ್ಲಿ ಅವುಗಳಿಗೆ ನೇರ ಸಂಬಂಧ ಪಟ್ಟ ಡಾ. ಎಂ. ಎ. ಗೋಪಾಲಸ್ವಾಮಿ ಮತ್ತು ಕೆಂಗಲ್ ಹನುಮಂತಯ್ಯನವರ ಬಗೆಗಿನ ವಿವರಗಳೂ ಆ ಲೇಖನಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಉಳಿದಂತೆ ಮೂರ್ತಿರಾಯರ ಪ್ರೌಢಶಾಲೆಯ ಗುರುಗಳು ವಿಶ್ವವಿದ್ಯಾಲಯದಲ್ಲಿ ಪ್ರಸಿದ್ದರಾದವರು-ಇವರ 'ಚಿತ್ರ'ಗಳಿವೆ.
ಎ. ಎನ್. ಮೂರ್ತಿರಾವ್ ಅವರ ’ಚಿತ್ರಗಳು-ಪತ್ರಗಳು' ಒಂದು ಆತ್ಮೀಯ ಪುಸ್ತಕ. ಆಪ್ತ ಧಾಟಿಯ ಅವರ ಬರವಣಿಗೆ ಹತ್ತಿರದ ಗೆಳೆಯನೊಬ್ಬನೊಡನೆ ಸಂವಾದ ನಡೆಸಿದಾಗಿನ ಅಸಲು ಅನುಭವವನ್ನು ಓದುಗನಿಗೆ ತಂದು ಕೊಡುತ್ತದೆ. ಅತ್ಯಂತ ಉತ್ಸಾಹದಿಂದ ಓದಿಸಿಕೊಳ್ಳುವ ಸುಮಾರು ಮುನ್ನೂರ ಮುವತ್ತು ಪುಟಗಳ ಈ ಪುಸ್ತಕವನ್ನು ಓದಿ ಮುಗಿಸಿದಾಗ ಮೂರ್ತಿರಾಯರ ವ್ಯಕ್ತಿತ್ವದ ಛಾಪು ಸುಗಂಧದಲ್ಲಿ ಅದ್ದಿ ತೆಗೆದ ಕರವಸ್ತ್ರದ ಪರಿಮಳದಂತೆ ಮನಸ್ಸಿನ ತುಂಬ ಆಕ್ರಮಿಸಿಕೊಂಡಿರುತ್ತದೆ.
ಕನ್ನಡದಲ್ಲಿ ಇಂಥ ಪ್ರಸ್ತಕಗಳು ಹೆಚ್ಚಿಲ್ಲ. ಡಿ ವಿ ಜಿ ಅವರ 'ಜ್ಞಾಪಕಚಿತ್ರ ಶಾಲೆ' ವಿ. ಸೀ. ಅವರ `ಮಹನೀಯರು', 'ಹಿರಿಯರು-ಗೆಳೆಯರು' ಮಾಸ್ತಿ ಅವರ ’ಸಾಹಿತ್ಯ ಲಾಲನ', ಬಿ ಜಿ ಎಲ್ ಸ್ವಾಮಿಯವರ 'ಪಂಚಕಲಶಗೋಪುರ' ಇಂಥ ಕಲವು ಪುಸ್ತಕಗಳನ್ನು ಬಿಟ್ಟರೆ 'ಚಿತ್ರಗಳು-ಪತ್ರಗಳು' ಪುಸ್ತಕದಂಥ ಒಂದು ಪರಂಪರೆ ಕನ್ನಡದಲ್ಲಿ ಬೆಳೆದು ಬಂದಿಲ್ಲವೆಂದೇ ಹೇಳಬಹುದು. ಪುಸ್ತಕದ ಹೆಸರೇ ಸೂಚಿಸುವ ಹಾಗೆ ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಹಿರಿಯರ ಗೆಳೆಯರ ವ್ಯಕ್ತಿಚಿತ್ರಗಳಿದ್ದರೆ, ಎರಡನೆಯ ಭಾಗದಲ್ಲಿ ಮೂರ್ತಿರಾಯರು ತಮ್ಮ ಗೆಳೆಯ ತೀ. ನಂ. ಶ್ರೀಕಂಠಯ್ಯನವರಿಗೆ, ಮಗ ಸುಬ್ಬರಾಮಯ್ಯನವರಿಗೆ ಹಾಗೂ ಸೊಸೆ ನ್ಯಾನ್ಸಿ ನಾಗರಾಜ್ ಅವರಿಗೆ ಬರೆದ ಪತ್ರಗಳಿವೆ. ಈ ಎರಡೂ ಭಾಗಗಳೂ ಒಂದಕ್ಕೊಂದು ಪೂರಕವೆಂದು ಹೇಳಲು ಮೂರ್ತಿರಾಯರು ನೀಡುವ ವಿವರಣೆ : `ವಾಸ್ತವವಾಗಿ ಮೊದಲು ಭಾಗದ ಚಿತ್ರಗಳನ್ನು ಬರೆಯಬೇಕೆನ್ನಿಸಿದ್ದು ಎರಡನೆಯ ಭಾಗದ ಪತ್ರಗಳನ್ನು ಓದಿದ ಮೇಲೆ, ಈ ಪತ್ರಗಳು ನನ್ನ ಕೈಗೆ ಬರದಿದ್ದರೆ ಅವನ್ನು ಓದಿ ಹಳೆಯ ಕಾಲದ ನೆನಪುಗಳು ಎಚ್ಚರಗೊಳ್ಳದಿದ್ದರೆ ಮೊದಲ ಭಾಗದ ಚಿತ್ರಗಳನ್ನು ಬರೆಯುವ ಯೋಚನೆಯೇ ಬರುತ್ತಿರಲಿಲ್ಲ.' ಮೂರ್ತಿರಾಯರ ಈ ವಿವರಣೆಯನ್ನು ನಾವು ಮರೆತರೂ ಎರಡೂ ಭಾಗಗಳಲ್ಲಿ ಒಂದೇ 'ಸಾಂಸ್ಕೃತಿಕ ಪರಿಸರ'ದ ಚಿತ್ರಣವಿರುವುದರಿಂದ ಒಂದು ಸಾಮಾನ್ಯ ನೆಲೆಯ ಹಿನ್ನಲೆಯಲ್ಲಿ ಚಿತ್ರಗಳು ಪತ್ರಗಳು ಪರಸ್ಪರ ಪೂರಕವಾಗಿವೆಯೆನ್ನಿಸುತ್ತದೆ.
ಮೊದಲ ಭಾಗದಲ್ಲಿ ಮೂರ್ತಿರಾಯರು ತಾವು ನಿಕಟವಾಗಿ ಕಂಡ ಹತ್ತು ಜನ ಮಹನೀಯರ ವ್ಯಕ್ತಿತ್ವವನ್ನು ಚಿತ್ರಿಸುವುದರ ಜೊತೆಗೆ ಆಕಾಶವಾಣಿ ಹಾಗೂ ಸಂಸ್ಕೃತಿ ಪ್ರಸಾರ ಇಲಾಖೆಯ ಬಗೆಗಿನ ಎರಡು ಲೇಖನಗಳನ್ನೂ ಸೇರಿಸಿದ್ದಾರೆ. ಆ ಲೇಖನಗಳಲ್ಲಿ ಅವುಗಳಿಗೆ ನೇರ ಸಂಬಂಧ ಪಟ್ಟ ಡಾ. ಎಂ. ಎ. ಗೋಪಾಲಸ್ವಾಮಿ ಮತ್ತು ಕೆಂಗಲ್ ಹನುಮಂತಯ್ಯನವರ ಬಗೆಗಿನ ವಿವರಗಳೂ ಆ ಲೇಖನಗಳಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಉಳಿದಂತೆ ಮೂರ್ತಿರಾಯರ ಪ್ರೌಢಶಾಲೆಯ ಗುರುಗಳು ವಿಶ್ವವಿದ್ಯಾಲಯದಲ್ಲಿ ಪ್ರಸಿದ್ದರಾದವರು-ಇವರ 'ಚಿತ್ರ'ಗಳಿವೆ. ಆರ್. ಡಬ್ಲ್ಯೂ. ಬೂಟ್, ದೇಶಿಕಾಚಾರ್‍ಯರು, ಮ್ಯಾಕಿಂಟಾಷ್, ಡಿ ಎನ್ ಮೂರ್ತಿ ಮೊದಲಾದವರು ಅಷ್ಟು ಹೆಸರು ಗಳಿಸದ, ಆದರೆ ಮೂರ್ತಿರಾಯರ ವ್ಯಕ್ತಿತ್ವದ ಮೇಲೆ ಗಾಢ ಮುದ್ರೆಯನ್ನೊತ್ತಿದ ವ್ಯಕ್ತಿಗಳಾದದರೆ, ಎಸ್. ರಾಧಾಕೃಷ್ಣನ್, ಎನ್. ಎಸ್ ಸುಬ್ಬರಾವ್, ಜೆ. ಸಿ. ರಾಲೋ, ಬಿ. ಎಂ. ಶ್ರೀಕಂಠಯ್ಯ, ಟಿ. ಎಸ್. ವೆಂಕಣ್ಣಯ್ಯ ಮತ್ತು ತೀ. ನಂ. ಶ್ರೀಕಂಠಯ್ಯ ಎಲ್ಲರೂ ತುಂಬಾ ಪ್ರಸಿದ್ದರಾದವರು.
ಮೂರ್ತಿರಾಯರ ಈ ’ಚಿತ್ರಗಳು' ಮುಖ್ಯವಾಗಿ ಮೂರು ಕಾರಣಗಳಗಾಗಿ ನನಗೆ ಬೆಲೆಯುಳ್ಳದ್ದಾಗಿ ಕಾಣಿಸುತ್ತವೆ :
ಮೊದಲನೆಯದಾಗಿ-ಮೂರ್ತಿರಾಯರು ತಾವು ಹತ್ತಿರದಿಂದ ಕಂಡ ವ್ಯಕ್ತಿಗಳನ್ನು ಕುರಿತು ಬರೆಯುವಾಗ-ಅವರು ಗುರುಗಳಾಗಿರಲಿ, ಗೆಳೆಯರಾಗಿರಲಿ-ಗೌರವದಿಂದ, ವಿನಯದಿಂದ ಆದರೆ ವಸ್ತುನಿಷ್ಠವಾಗಿ ಬರೆಯುತ್ತಾರೆ. ಮೂರ್ತಿರಾಯರ ಬರವಣಿಗೆಯಲ್ಲಿ ಕಂಡುಬರುವ ಈ ಗುಣ ಬಹಳ ಅಮೂಲ್ಯವಾದುದೆಂದು ನನ್ನ ನಂಬುಗೆ. ಎಲ್ಲಿಯೂ ಮೂರ್ತಿರಾಯರ ಬರವಣಿಗೆ ತೂಕ ತಪ್ಪುವುದಿಲ್ಲ, ಘನತೆಯನ್ನು ಬಿಟ್ಟುಕೊಡುವುದಿಲ್ಲ. ತನ್ನ ಹದವನ್ನು ಕಳೆದುಕೊಳ್ಳುವುದಿಲ್ಲ. ಹಾಗೆಂದು ಅವರು ಎಲ್ಲರ ಬಗ್ಗೆ ಒಳ್ಳೆಯ ಮಾತುಗಳನ್ನೇ ಬರೆದಿದ್ದಾರೆ' ಎಂದಲ್ಲ. ತಾವು ಕಂಡು ಮೆಚ್ಚಿದ ಗುಣಗಳನ್ನು ಮುಕ್ತವಾಗಿ ಹೊಗಳಿದ್ದಾರೆ. ಹಾಗೆಯೇ ಇಷ್ಟವಾಗದ ನಡವಳಿಕೆಗಳನ್ನೂ ಯಾವುದೇ ಕೊಂಕಿಲ್ಲದೆ ಎತ್ತಿ ಹೇಳಿದ್ದಾರೆ. ಹೀಗಾಗಿ ಅವರ ಬರವಣಿಗೆ ಅಥೆಂಟಿಸಿಟಿಯನ್ನು ಪಡೆದುಕೊಂಡಿದೆ. ಮಾತ್ರವಲ್ಲ ಅವರು ಚಿತ್ರಿಸಿರುವ ಚಿತ್ರಗಳು ಅಪೂರ್ಣ ಚಿತ್ರಗಳಾಗದೆ ತಮ್ಮ ಮಿತಿಯಲ್ಲಿ `ಸಮಗ್ರಚಿತ್ರ’ಗಳಾಗಿವೆ. ಒಂದು ಉದಾಹರಣೆಯನ್ನು ಕೊಡುವುದಾದರೆ- ಜೆ. ಸಿ. ರಾಲೂ ಅವರ ಮಹಾರಾಜ ಕಾಲೇಜಿನ ಬಗೆಗಿನ ಅಖಂಡ ಪ್ರೀತಿ, ಅವರ ಇಂಗ್ಲೆಂಡ್ ಬಗೆಗಿನ ಅತೀವ ಅಭಿಮಾನ, ಸಭ್ಯ ನಡತೆ (manners)ಯ ಕೊರತೆ, ಇಂಗ್ಲಿಷ್ ಸಾಹಿತ್ಯ ಬೋಧೆಯ ಸೊಗಸು, ಕೀಟಲೆಯ ಪ್ರವೃತ್ತಿ- ಈ ಎಲ್ಲವನ್ನೂ ಏಕತ್ರ ಹದಗೆಡದಂತೆ ಹೊಂದಿಸಿರುವುದರಲ್ಲಿ ಮೂರ್ತಿರಾಯರ ಬರವಣಿಗೆಯ ವೈಶಿಷ್ಟ್ಯವಿದೆ.
ಎರಡನೆಯದಾಗಿ- ಈ 'ಚಿತ್ರಗಳು’ ಕೇವಲ 'ವ್ಯಕ್ತಿಚಿತ್ರ' ಮಾತ್ರವಾಗದೆ ಒಂದು ಸಾಂಸ್ಕೃತಿಕ ಪರಿಸರವನ್ನೂ ಚಿತ್ರಿಸುತ್ತವೆ. ಒಂದು ರೀತಿಯಲ್ಲಿ ಇವು ಸ್ವಾತಂತ್ರ್ಯಪೂರ್ವದ ನಮ್ಮ ನಾಡಿನ ’ಸಾಂಸ್ಕೃತಿಕ ದಾಖಲೆ' ಎನ್ನಬಹುದು. ಆಗಿನ ಶಿಕ್ಷಣ ಪದ್ದತಿಯ ರೀತಿ, ಅಧ್ಯಾಪಕ ವಿದ್ಯಾರ್ಥಿಗಳ ಸಂಬಂಧ ಇಂಗ್ಲಿಷ್‌ನ ಸ್ಥಾನ -ಇಂಗ್ಲೀಷಿನವರ ಸ್ಥಾನಮಾನ, ಕನ್ನಡದ ಗತಿ ಕನ್ನಡಿಗರ ಮಾನಸಿಕ ಸ್ಥಿತಿ, ಸ್ವಾತಂತ್ರ್ಯದ ಹಂಬಲ, ನವೋದಯ ಕಾವ್ಯದ ಸಿದ್ದತೆ ಈ ಎಲ್ಲವೂ ಇಲ್ಲಿ ಬರುತ್ತವೆ. ಆದರೆ ಇವು ಯಾವುವೂ 'ಚಿತ್ರಗಳ' ಒಟ್ಟು ಶಿಲ್ಪಕ್ಕೆ ಭಂಗ ಬಾರದಂತೆ ಅನಿವಾರ್‍ಯ ವಿವರಗಳಾಗಿ ಚಿತ್ರಣಗೊಂಡಿವೆ.
ಈ ಮೂರನೆಯದಾಗಿ-ಒಬ್ಬ ವ್ಯಕ್ತಿ ತನ್ನ ಪರಿಸರ ಹಾಗೂ ತನ್ನ ಪರಿವಲಯದೊಳಗೆ ಬಂದ ಪ್ರಭಾವಿ ವ್ಯಕ್ತಿಗಳಿಂದ ಹೇಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆಂಬುದನ್ನೂ ನಾವಿಲ್ಲಿ ಗುರ್ತಿಸಬಹುದು. ಈ ಎಲ್ಲ ವ್ಯಕ್ತಿಗಳು ಮೂರ್ತಿಯವರ ವ್ಯಕ್ತಿತ್ವದ ಮೇಲೆ ಒಂದಲ್ಲ ಒಂದು ರೀತಿ ಪ್ರಭಾವ ಬೀರಿದವರು. ಹೀಗಾಗಿ ಈ ಚಿತ್ರಗಳು ಮೂರ್ತಿರಾಯರ 'ಚಿತ್ರ'ವೂ ಆಗಿಬಿಡುತ್ತದೆಂಬುದನ್ನು ನಾವು ಮರೆಯುವಂತಿಲ್ಲ.
'ಚಿತ್ರಗಳು- ಪತ್ರಗಳು' ಪುಸ್ತಕದ ಎರಡನೆಯ ಭಾಗದಲ್ಲಿ ಮೂರ್ತಿರಾಯರು ತಮ್ಮ ಗೆಳೆಯ ತೀ. ನಂ. ಶ್ರೀಕಂಠಯ್ಯನವರಿಗೆ ಬರೆದ ಸುಮಾರು 70 ಪತ್ರಗಳು, ಮಗ ಸುಬ್ಬರಾಮಯ್ಯನವರಿಗೆ ಬರೆದ 5 ಪತ್ರಗಳು ಹಾಗೂ
ಸೊಸೆ ನ್ಯಾನ್ಸಿ ನಾಗರಾಜ್ ಅವರಿಗೆ ಬರೆದ ಒಂದು ಪತ್ರ -ಇಲ್ಲಿದೆ. ಈ ಪತ್ರಗಳು ವೈಯಕ್ತಿಕ ಸಂಬಂಧದ ಮಹತ್ವವನ್ನು, ಗಾಢತೆಯನ್ನು ನಮಗೆ ಮನ ಕಾಣಿಸುವುದರ ಜೊತೆಗೆ ಅನೇಕ ಮಹತ್-ಅಮಹತ್ ಘಟನೆಗಳೆಲ್ಲ ಸೇರಿ ಬದುಕು ರೂಪುಗೊಳ್ಳುತ್ತಾ ಹೋಗುತ್ತದೆಂಬುದನ್ನು ತಿಳಿಸಿಕೊಡುತ್ತವೆ. ಬದುಕಿನ ಸಣ್ಣ ಪುಟ್ಟ ಸಂಗತಿಗಳ ಸಂದರ್ಭವಶದಿಂದ ಹೇಗೆ ನಮ್ಮ ಸುಖ ಸಂತೋಷಗಳಿಗೆ ಕಾರಣವಾಗಬಲ್ಲುವು. ದುಃಖಗಳು ಹೇಗೆ ಆತ್ಮೀಯರ ಬಳಿ ಹಗುರಾಗುತ್ತವೆಂಬುದು, ಸಂಕಟದ ಸಮಯದಲ್ಲಿ ಆತ್ಮೀಯರ ಸನಿಹ ಹೇಗೆ ಸುಖ ಕೊಡುತ್ತದೆಂಬುದು, ಆರೋಗ್ಯಪೂರ್ಣ ಮನಸ್ಸು ಗೆಳೆಯರ ಸಣ್ಣ ಪುಟ್ಟ ತಪ್ಪುಗಳನ್ನು ತಾಳಿಕೊಂಡು ಸಂಬಂಧ ಉಳಿಸಿಕೊಳ್ಳಲು ಕಾತರಿಸುತ್ತದೆಂಬುದು-ಈ ಎಲ್ಲವೂ ಇಲ್ಲಿನ ಪತ್ರಗಳ ಹಿನ್ನೆಲೆಯಲ್ಲಿರುವ ಮೂಲಧಾತುಗಳು. 'ಸಂಬಂಧಗಳ ಗಾಢತೆಯ ಜೊತೆ ನಾನು ಮೊದಲೇ ಸೂಚಿಸಿದಂತೆ-ಸಾಂಸ್ಕೃತಿಕ ಚರ್ಚೆಯೂ ಈ ಪತ್ರಗಳ ಒಳರಚನೆಯಲ್ಲಿ ಸೇರಿಕೊಂಡಿದೆ. ಮೂರ್ತಿರಾಯರ ಒಟ್ಟು ಬರವಣಿಗೆಯ ಬಹು ಮಹತ್ವದ ಗುಣ-ಅವರ ಆರೋಗ್ಯಪೂರ್ಣ ಮನಸ್ಸಿನ ಲವಲವಿಕೆಯ ತಿಳಿಹಾಸ್ಯ, ಈ ಹಾಸ್ಯ ಬರವಣಿಗೆಯ ಶೈಲಿ ಮಾತ್ರವಲ್ಲ, ಅವರ ಮನೋಧರ್ಮ, ಆದ್ದರಿಂದಲೇ 'ಚಿತ್ರಗಳು-ಪತ್ರಗಳು' ನಮಗೆ ಇಷ್ಟೊಂದು ಆಪ್ತವಾಗುವುದು.
-ನರಹಳ್ಳಿ ಬಾಲಸುಬ್ರಹ್ಮಣ್ಯ
ಚಿತ್ರಗಳು-ಪತ್ರಗಳು (ವ್ಯಕ್ತಿಚಿತ್ರ ಹಾಗೂ ಪತ್ರಸಾಹಿತ್ಯ)
ಮೊದಲನೆಯ ಆವೃತ್ತಿ 1978
ಶಾರದಾಮಂದಿರ ರಾಮಯ್ಯರ್ ರಸ್ತೆ, ಮೈಸೂರು 570004
342 ಪುಟಗಳು ಬೆಲೆ ರೂ. 15-00 20-00
ಕೃಪೆ: ಗ್ರಂಥಲೋಕ, ಜನೆವರಿ 1981
©2024 Book Brahma Private Limited.