‘ಸರಸ್ವತೀ ನದಿ’ ಎಂದೊಡನೆ ಥಟ್ಟನೆ ನೆನಪಾಗುವುದು ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಸರಸ್ವತೀ ಕೂಡಿಕೊಳ್ಳುತ್ತವೆ ಎಂದು ಬಹು ಹಿಂದಿನಿಂದ ಹೇಳಿರುವ ಮಾತುಗಳು. ಅಲ್ಲಿ ಗಂಗೆ ಮತ್ತು ಯಮುನೆಯರನ್ನು ಸ್ಪಷ್ಟವಾಗಿ ನೋಡಬಹುದು. ಆದರೆ ಸರಸ್ವತೀ ಕುರಿತು ಅಲ್ಲಿ ಅದು ಗುಪ್ತಗಾಮಿನಿ ಎಂದು ಧಾರ್ಮಿಕ ನಂಬಿಕೆ ಇರುವವರು ಹೇಳುತ್ತಲೇ ಬಂದಿದ್ದಾರೆ.
ಈ ನದಿಯ ಸುತ್ತ ಇರುವ ಪೌರಾಣಿಕ, ಧಾರ್ಮಿಕ ನಂಬಿಕೆಗಳು, ಇತಿಹಾಸ-ವಿಜ್ಞಾನ ಎಲ್ಲವೂ ಈ ಕೃತಿಯಲ್ಲಿ ನಿಚ್ಚಳವಾಗಿ ಮೂಡಿಬಂದಿದೆ. ಅಷ್ಟೇ ಅಲ್ಲ, ಸರಸ್ವತೀ ಎಂದೊಡನೆ ಅದರ ಜೊತೆಯಲ್ಲಿ ಹಿಮಾಲಯದ ಕಥೆ ಇದೆ, ಥಾರ್ ಮರುಭೂಮಿಯ ಕಥೆ ಇದೆ, ಆರಾವಳಿ ಪರ್ವತದ ಕಥೆ ಇದೆ, ಗುಜರಾತಿನ ನೆಲದ ಕಥೆ ಇದೆ. ಸರಸ್ವತೀ ನದಿಯ ಉಗಮದಿಂದ ತೊಡಗಿ ಕಾಲದ ಪ್ರವಾಹದಲ್ಲಿ ಅದಕ್ಕೊದಗಿದ ಸ್ಥಿತಿ ಗತಿಗಳನ್ನೂ, ಕೊನೆಗೆ ಅದು ಥಾರ್ ಮರುಭೂಮಿಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡ ವಾಸ್ತವತೆಯನ್ನು, ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳನ್ನು ಆಧರಿಸಿ ಪುನಾರಚಿಸಲಾಗಿದೆ.
ಸರಸ್ವತೀ ನದಿ ಹರಿದದ್ದು ನಿಜ, ಅದು ಕಣ್ಮರೆಯಾದದ್ದೂ ನಿಜ. ಪುರಾಣಗಳಲ್ಲಿ ಉಲ್ಲೇಖವಾದ ಈ ನದಿಯ ಬಗ್ಗೆ ವೈಜ್ಞಾನಿಕ ಶೋಧಗಳು ಸಾಕ್ಷಿ ಒದಗಿಸಿವೆ. ಕನ್ನಡದಲ್ಲಿ ಸರಸ್ವತೀ ನದಿ ಕುರಿತು ಸದ್ಯದಲ್ಲಿ ಹೊರಬಂದಿರುವುದು ಇದೊಂದೇ ಕೃತಿ.
ಹೊಸತು- ಡಿಸೆಂಬರ್ -2005
ಭೂವಿಜ್ಞಾನಕ್ಕೆ ಸಂಬಂಧಿಸಿದ ಹಲವು ಉಪಯುಕ್ತ ಪುಸ್ತಕಗಳನ್ನು ಬರೆದಿರುವ ಟಿ. ಆರ್. ಅನಂತರಾಮು ಅವರು ಸರಸ್ವತೀ ನದಿಯನ್ನು ಕುರಿತು ಸಾಕಷ್ಟು ಮಾಹಿತಿಗಳನ್ನು ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ. ಪುರಾಣ, ಇತಿಹಾಸ, ವಿಜ್ಞಾನಗಳು ನಮ್ಮ ಹಲವಾರು ವಿದ್ವಾಂಸರ ಬರಹಗಳಲ್ಲಿ ಕಲಬೆರಕೆಯಾಗಿ ಓದುಗರಿಗೆ ಗೊಂದಲ ಉಂಟುಮಾಡುತ್ತವೆ. ಆದರೆ ಈ ಪುಸ್ತಕ ಮೂರು ದೃಷ್ಟಿಗಳನ್ನೂ ಸಮತೋಲನದಿಂದ ಚಿತ್ರಿಸುತ್ತದೆ. ಸರಸ್ವತೀ ನದಿ ಗುಪ್ತಗಾಮಿನಿಯಾಗಿ ಹರಿಯುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಆದರೆ ಸರಸ್ವತೀ ನದಿ ತನ್ನ ಇತಿಹಾಸದಲ್ಲಿ ಯಾವ ರೀತಿ ಅಸ್ತಿತ್ವವನ್ನು ಕಳೆದುಕೊಂಡಿತು ಎಂಬುದನ್ನು ಅನಂತರಾಮು ಅವರು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ನದಿಯ ಬಗ್ಗೆ ನಡೆದ ಶೋಧನೆಗಳ ವಿವರಗಳು, ಚಿತ್ರಗಳು ಪುಸ್ತಕಕ್ಕೆ ಅಧಿಕೃತತೆಯನ್ನು ತಂದುಕೊಟ್ಟಿದೆ.
©2025 Book Brahma Private Limited.