ವಿರಾಟ್ ಪದ್ಮನಾಭ ಅವರ `ಬೆಟ್ಟದ ಹೂವು’ ಆಧುನಿಕ ಭಾರತದ ಸಾಮಾಜಿಕ ರಾಮಾಯಣ ಕೃತಿಯಾಗಿದೆ. 'ಬೆಟ್ಟದ ಹೂವು' ಸಿನಿಮಾದ ತಾತ್ವಿಕತೆಯನ್ನು ಕುರಿತು ಪದ್ಮನಾಭ ಅವರು ತುಂಬಾ ಗಂಭೀರ ಅಧ್ಯಯನ ಮಾಡಿ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ಕಥಾನಾಯಕ ಮೂಲತಃ ಬಡಕುಟುಂಬದ ಹುಡುಗ. ಆತನಿಗೆ ಕುವೆಂಪು ಅವರ 'ಜನಪ್ರಿಯ ವಾಲ್ಮೀಕಿ ರಾಮಾಯಣ' ಕೃತಿಯನ್ನು ಕೊಂಡುಕೊಳ್ಳುವ ಹಂಬಲ ಕೊಂಡುಕೊಳ್ಳುವ ಮೂಲಕ 'ಕಂಡುಕೊಳ್ಳುವ' ಉಮೇದು ಇದೆ. ಈತನಲ್ಲಿ ಈಗಾಗಲೇ ಸತ್ಯಹರಿಶ್ಚಂದ್ರ, ಅಂಬೇಡ್ಕರ್, ಬಲರಾಮ ಪುಸ್ತಕಗಳು ಇವೆ. ಜೊತೆಗೆ ರಾಮಾಯಣದ ಗದ್ಯಕಥನ ಕೃತಿ ಬೇಕಾಗಿದೆ. ಈ ಅಂಶವೊಂದನ್ನು ಆಕರವಾಗಿಟ್ಟುಕೊಂಡು ಲೇಖಕ ಪದ್ಮನಾಭ ಅವರು ಗಾಂಧಿ ಮೆಚ್ಚುವ ಹರಿಶ್ಚಂದ್ರ, ಅಂಬೇಡ್ಕರ್ ಸಾಮಾಜಿಕ ಕಳಕಳಿ, ರಾಮಾಯಣದ ನೈತಿಕತೆಗಳನ್ನು ಒಗ್ಗೂಡಿಸಿ ಹೊಸ ತಾತ್ವಿಕತೆಯೊಂದನ್ನು 'ಬೆಟ್ಟದ ಹೂವು' ಸಿನಿಮಾದ ಆಂತರ್ಯದಲ್ಲಿ ಕಾಣುತ್ತಾರೆ.
ಪದ್ಮನಾಭ ಅವರ ಈ ಒಳನೋಟದ ವಿಶ್ಲೇಷಣೆಯು ಸಿನಿಮಾದ ವಸ್ತುವನ್ನು ಸಾಕಷ್ಟು ವಿಸ್ತರಿಸಿ ಹೊಸ ನೆಲೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತದೆ. 'ಎಂಬತ್ತರ ದಶಕದ' ಅಂದರೆ, ಈ ಸಿನಿಮಾ ಸೃಷ್ಟಿಯಾದ ಸಂದರ್ಭದ ಸೂಚನೆಗಳನ್ನು ಸಾದರಿಸುತ್ತ 'ಬೆಟ್ಟದ ಹೂವು' ಸಿನಿಮಾದ 'ಧ್ವನಿ ಶಕ್ತಿ'ಯನ್ನು ರಾಷ್ಟ್ರೀಯ ಆಯಾಮಕ್ಕೆ ಕೊಂಡೊಯ್ಯುತ್ತಾರೆ. ಅವರ ಮಾತುಗಳು ಹೀಗಿವೆ; “ಎಂಬತ್ತರ ದಶಕವು ತೀವ್ರವಾದ ಬದಲಾವಣೆಯನ್ನು ತಂದುಕೊಳ್ಳುವ ನಡೆಗಳನ್ನು ಪ್ರತಿನಿಧಿಸಿತ್ತು. ಒಂದು ಕಡೆಗೆ ಬಡತನ ಉಂಟುಮಾಡಿದ ಸಂಕೀರ್ಣ ಸವಾಲುಗಳು; ಅವುಗಳ ಮಧ್ಯೆದಲ್ಲಿಯೇ ಅಭಿವೃದ್ಧಿಯನ್ನು ಕಂಡುಕೊಳ್ಳುವ ಸರ್ಕಾರಿ ಪ್ರಯತ್ನಗಳು; ಮತ್ತೊಂದು ಕಡೆಗೆ ಜನರನ್ನು ಅಜ್ಞಾನದ ಸಂಕೋಲೆಯಿಂದ ವಿಮುಕ್ತವಾಗಿಸುವ ಅರಿವಿನ ಆಂದೋಲನದ ಹೆಜ್ಜೆಗಳು; ಆಗ ಮೂಡಿಬಂದ 'ಬೆಟ್ಟದ ಹೂವು' ಹೊಸ ಪೀಳಿಗೆಯನ್ನು ಹಳೆಯ ಬಿಕ್ಕಟ್ಟುಗಳಿಂದ ಬಿಡುಗಡೆಗೊಳಿಸುವ ರಾಷ್ಟ್ರೀಯ ಪ್ರಜ್ಞೆಯ ಅರಿವಿನ ಆಂದೋಲನದ ಸದಾಶಯಗಳನ್ನು ಧ್ವನಿಸಿತ್ತು.” – ಹೀಗೆ ವಿಶ್ಲೇಷಿಸುವ ಪದ್ಮನಾಭ ಅವರು ಸಿನಿಮಾಕ್ಕೆ ಮಾತ್ರವಲ್ಲ ರಾಷ್ಟ್ರೀಯ ಪ್ರಜ್ಞೆಗೂ ತಮ್ಮದೇ ಹೊಸ ವ್ಯಾಖ್ಯಾನ ಕೊಟ್ಟಿದ್ದಾರೆ.
©2025 Book Brahma Private Limited.