‘ಹಾಡು ಮುಗಿಯುವುದಿಲ್ಲ’ ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ಚಿತ್ರಗೀತೆ ಮತ್ತು ಧಾರವಾಹಿ ಶೀರ್ಷಿಕೆ ಗೀತೆಗಳ ದಾಖಲಾತಿ ಮತ್ತು ಅಧ್ಯಯನದ ಸಂಕಲನ. ಈ ಕೃತಿಯನ್ನು ಪತ್ರಕರ್ತ, ಲೇಖಕ ಎನ್.ಎಸ್. ಶ್ರೀಧರ ಮೂರ್ತಿ ಸಂಪಾದಿಸಿದ್ದಾರೆ.
ತಮ್ಮ ಸಮೃದ್ಧವಾದ ಭಾವಗೀತೆಗಳಿಂದ ಸುಗಮ ಸಂಗೀತಕ್ಕೆ ವಿಶೇಷ ಚಾಲನೆ ನೀಡಿ, ಕಾವ್ಯವನ್ನು ಓದುಗರ ಮತ್ತು ಕೇಳುಗರ ಪ್ರೀತಿಯ ಸಂಗಾತಿಯನ್ನಾಗಿಸಿದ ಮುಖ್ಯ ಕವಿಗಳಲ್ಲಿ ಎಚ್ಚೆಸ್ವಿ ಒಬ್ಬರು. ಸಾಹಿತ್ಯವನ್ನು, ಓದುವ ಒಂದು ಸಂಗೀತ ಶೈಲಿಯಾಗಿ, ಸಂಗೀತದ ಮೂಲಕ ಸಾಹಿತ್ಯದ ಅರ್ಥೈಸುವಿಕೆಯಾಗಿ ಅವರು ಸುಗಮ ಸಂಗೀತವನ್ನು ಪರಿಗಣಿಸಿರುವುದು, ಗಾಯಕರಿಗೆ ಮಾರ್ಗದರ್ಶನದಂತಿದೆ.
ಎಚ್ಚೆಸ್ವಿ ವಿನಮ್ರ ಗೀತೆಗಳು
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದರಿಂದ ಏನು ಲಾಭ ಎಂದು ಕೇಳಿದಾಗ ಎಚ್ಚೆಸ್ವಿ ಹೇಳಿದ್ದರು: ಅಧ್ಯಕ್ಷರಾದರೆ ಪುಸ್ತಕಗಳು ಚೆನ್ನಾಗಿ ಮಾರಾಟ ಆಗುತ್ತವೆ. ಅದು ನಿಜವೆಂಬಂತೆ ಎಚ್ಚೆಸ್ವಿ ಕುರಿತು ಪುಸ್ತಕಗಳು ಬರುತ್ತಿವೆ. ಅವರು ಬರೆದದ್ದು, ಎಂದೋ ಬರೆದದ್ದು, ಮುಂದೆ ಬರೆಯುವುದು ಎಲ್ಲವನ್ನೂ ಪುಸ್ತಕ ಮಾಡಲು ಪ್ರಕಾಶಕರು ಮುಂದಾಗುತ್ತಿದ್ದಾರೆ. ಸಮ್ಮೇಳನದ ಹೊತ್ತಿಗೆ ಪುಸ್ತಕ ಮಾರುಕಟ್ಟೆಯಲ್ಲಿರಬೇಕು ಅನ್ನುವ ಒತ್ತಡದಲ್ಲಿ ಪ್ರಕಾಶಕರಿದ್ದಾರೆ. ಲೇಖಕರನ್ನು ಕೇಳಿ ಎಚ್ಚೆಸ್ವಿಯವರ ಬಗ್ಗೆ ಬರೆಯಿರಿ ಅಂತ ಒತ್ತಾಯಿಸುವುದೂ ನಡೆದಿದೆ. ಈ ಮಧ್ಯೆ ಎಚ್ಚೆಸ್ವಿಯವರ ಚಿತ್ರಗೀತೆಗಳನ್ನು ಪುಸ್ತಕ ರೂಪದಲ್ಲಿ ತರಲು ಅಂಕಿತ ಪುಸ್ತಕ ನಿರ್ಧರಿಸಿದೆ. ಚಿತ್ರಗೀತೆ ಪಂಡಿತರಾದ ಶ್ರೀಧರಮೂರ್ತಿ, ಎಚ್ಚೆಸ್ವಿ ಅವರ ಎಲ್ಲಾ 61 ಗೀತೆಗಳನ್ನು ಸೇರಿಸಿ ಒಂದು ಪುಸ್ತಕ ಸಂಪಾದಿಸಿದ್ದಾರೆ. ಅದರಲ್ಲಿ ಎಚ್ ಎಸ್ ಎ ಅವರು ಸಿನಿಮಾ, ಸೀರಿಯಲ್ಲುಗಳಿಗೆ ಬರೆದ ಗೀತೆಗಳು ಸೇರಿವೆ.
ವೆಂಕಟೇಶಮೂರ್ತಿಯವರ ಚಿತ್ರಗೀತೆ ಬರೆಯುವ ನಿರ್ಧಾರವನ್ನು ಶ್ರೀಧರಮೂರ್ತಿ ಮೆಚ್ಚಿಕೊಂಡು ಈ ಮಾತುಗಳನ್ನು ಬರೆದಿದ್ದಾರೆ: 'ಭಾವಗೀತೆಗಳಿಂದಲೇ ಜನಪ್ರಿಯತೆಯನ್ನು ಪಡೆದ ಹಿರಿಯ ಕವಿಯೊಬ್ಬರು 'ಸಂಗೀತದ ಮೀಟರ್‌ಗೆ ಬರೆಯುವುದಿಲ್ಲ' ಎಂದುತಮ್ಮ ಹೆಗ್ಗಳಿಕೆಯನ್ನು ಹೇಳಿಕೊಂಡಿದ್ದು ಉಂಟು. ಸಾಹಿತ್ಯದ ಅಹಂಕಾರ ಆ ಕ್ಷೇತ್ರದಿಂದ ಸಿನಿಮಾಕ್ಕೆ ಬಂದ ಎಲ್ಲರನ್ನೂ ಕಾಡುವುದನ್ನು ಅನೇಕ ಉದಾಹರಣೆಗಳ ಮೂಲಕ ಗಮನಿಸಬಹುದು. ಆದರೆ ಎಚ್. ಎಸ್.ವಿ ಸಾಹಿತ್ಯ ದಿಂದ ಬಂದ ನಂತರ ಸಿನಿಮಾಕ್ಕೆ ವಿನಮ್ರತೆಯಿಂದಲೇ ಪ್ರವೇಶಿಸಿದವರು. ಇಲ್ಲಿನ ಅಗತ್ಯಗಳನ್ನು ಗೌರವಿಸಿದವರು.'
ಕೃಪೆ: ವಿಜಯ ಕರ್ನಾಟಕ, (2020 ಫೆಬ್ರುವರಿ 02)
©2024 Book Brahma Private Limited.