'ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ' ಶರಣು ಹುಲ್ಲೂರು ಅವರ ಬರೆದಿರುವ ಕೃತಿ. ಇಲ್ಲಿ ಕನ್ನಡದ 100 ಸ್ಮರಣೀಯ ಸಿನಿಮಾಗಳ ಕುರಿತು ಬರೆಯಲಾಗಿದೆ. ಈ ಕೃತಿಯ ಕುರಿತು ಬರೆದಿರುವ ಲೇಖಕ ಜೋಗಿ ಅವರು 'ಒಂದು ಸಿನಿಮಾದ ಆಯಸ್ಸು ಎಷ್ಟು ಎನ್ನುವ ಪ್ರಶ್ನೆಯನ್ನು ನಾನು ಆಗಾಗ ಕೇಳಿಕೊಳ್ಳುತ್ತಿರುತ್ತೇನೆ. ಎಷ್ಟೋ ಸಿನಿಮಾಗಳು ಅಕಾಲ ಮರಣಕ್ಕೆ ತುತ್ತಾಗುತ್ತವೆ. ಆದರೆ ಕೆಲವು ಸಿನಿಮಾಗಳು ಮಾತ್ರ ಚಿರಾಯುವಾಗುತ್ತವೆ. ಹಾಗೆ ನಮ್ಮೊಳಗೆ ಚಿರಂತನವಾಗಿ ಉಳಿಯುವ ಕತೆ, ಕವಿತೆ, ಚಿತ್ರಗೀತೆ ಮತ್ತು ಸಿನಿಮಾಗಳು ಈ ಕಾಲದ್ದಾಗಿರದೇ, ನಾವು ಬಾಲ್ಯದಲ್ಲಿ ನೋಡಿದ್ದೇ ಆಗಿರುತ್ತವೆ. ಬಾಲ್ಯದಲ್ಲೋ ಅರೆತಾರುಣ್ಯದಲ್ಲೋ ನಮ್ಮ ಮನಸ್ಸು ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವುದು ಕೂಡ, ಆ ನೆನಪುಗಳು ಮಧುರವೂ ಶಾಶ್ವತವೂ ಆಗಿರುವುದಕ್ಕೆ ಕಾರಣ ಇರಬಹುದು. ಹಾಗಂತ ನಾವು ನಮ್ಮ ಕಾಲದ ಅಪೂರ್ವ ಕಲಾಕೃತಿಗಳನ್ನು ನಿರ್ಲಕ್ಷ್ಯ ಮಾಡಕೂಡದು. ನಮಗೆ ಸಾಧಾರಣ ಅನ್ನಿಸಿದ್ದು, ನಮ್ಮ ಮುಂದಿನ ತಲೆಮಾರಿನ ಪಾಲಿಗೆ ಅತ್ಯಮೂಲ್ಯ ನೆನಪನ್ನು ಉಳಿಸುವ ಕೃತಿ ಆಗಿರಬಹುದು. ಹೀಗಾಗಿ ಸ್ಮೃತಿಯನ್ನು ರೂಪಿಸುವ ಕೆಲಸವನ್ನು ಮನಸ್ಸು ಮತ್ತು ಕಾಲ ಎರಡೂ ಸೇರಿ ಮಾಡುತ್ತಾ ಹೋಗುತ್ತವೆ. ಇದನ್ನು ಅರ್ಥಮಾಡಿಕೊಂಡು ಆ ಕಾಲ ಮತ್ತು ಈ ಕಾಲದ ಮೆಚ್ಚಿನ ನೂರು ಸಿನಿಮಾಗಳನ್ನು ಗೆಳೆಯ, ಸಹೋದ್ಯೋಗಿ ಶರಣು ಹುಲ್ಲೂರು ಈ ಪುಸ್ತಕದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ನನ್ನ ಮೆಚ್ಚಿನ ಸಿನಿಮಾಗಳು ಇಲ್ಲಿರುವುದನ್ನು ನೋಡಿ ರೋಮಾಂಚನಗೊಂಡಿದ್ದೇನೆ. ನಾನು ಮೆಚ್ಚಿದ ಕೆಲವು ಸಿನಿಮಾಗಳು ಇಲ್ಲಿಲ್ಲವಲ್ಲ ಅಂತ ಆಶ್ಚರ್ಯಪಟ್ಟಿದ್ದೇನೆ. ಈ ಸಿನಿಮಾ ನನಗೆ ನೆನಪೇ ಇರಲಿಲ್ಲವಲ್ಲ ಅಂತ ಬೆರಗಾಗಿದ್ದೇನೆ. ಶರಣು ಹುಲ್ಲೂರು ಅಸಾಧ್ಯ ಜೀವಂತಿಕೆಯ, ಹೊಸತನಗಳ ಹುಡುಕಾಟದ, ಬರೆಯುವ ಹುರುಪು ಉಳಿಸಿಕೊಂಡ ಲವಲವಿಕೆಯ ಗೆಳೆಯ. ಈ ಪುಸ್ತಕ ಅವರ ಸಿನಿಮಾ ಪ್ರೀತಿಗೆ ಮತ್ತೊಂದು ಸಾಕ್ಷಿ. ಇದು ಚಿಗುರಿಸಿದ ನೆನಪುಗಳಲ್ಲಿ ನಾನು ನನ್ನ ತಾರುಣ್ಯಕ್ಕೆ ಮರಳಿದ್ದೇನೆ. ನಿಮ್ಮನ್ನೂ ಇದು ಕಾಲಯಂತ್ರದಲ್ಲಿ ಹಿಂದಕ್ಕೊಯ್ಯುತ್ತದೆ ಎಂದು ನಂಬಿದ್ದೇನೆ. -ಜೋಗಿ
©2024 Book Brahma Private Limited.