ಲೇಖಕಿ ಜ್ಯೋತಿ ಗುರುಪ್ರಸಾದ್ ಅವರ ‘ಮನಸು ಮಾಗಿದ ಸುಸ್ವರ’ ಕೃತಿಯು ಎಪ್ಪತ್ಮೂರು ಕನ್ನಡ ಚಲನಚಿತ್ರಗೀತೆಗಳ ಒಲವನ್ನು ಸಾಕ್ಷಾತ್ಕರಿಸುವ ರಸ ನಿಮಿಷಗಳು ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಸಂಗೀತ ನಿರ್ದೇಶಕ ಹಂಸಲೇಖ ಈ ಕೃತಿಗೆ ಹಿನ್ನುಡಿ ಬರೆದಿದ್ದು, ‘ಜನಬಿಂಬ’ದಲ್ಲಿನ ತಮ್ಮ ಅಂಕಣದ ಹೂರಣವು ಈ ಹೊತ್ತಿಗೆಯಲ್ಲಿ ಮಾಗಿದ ಸುಸ್ವರವಾಗಿ ಪಲ್ಲವಿಸಿವೆ. ಪ್ರಪಂಚದ ಸಿನಿಮಾ ರಂಗದಲ್ಲಿ ಭಾರತೀಯ ಸಿನಿಮಾ ರಂಗವೇ ಪ್ರತ್ಯೇಕ ಸ್ಥಾನ ಪಡೆಯಲು ಅದರ ಸಂಗೀತದ ಗುಣ ಕಾರಣವಾಗಿದೆ. ಹಾಡುಗಳಿಲ್ಲದ ಭಾರತೀಯ ಸಿನಿಮಾ ಪ್ರಪಂಚವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸಿನಿಮಾ ಹಾಡುಗಳೂ ಸಹ ನಮ್ಮ ಸಂಸ್ಕೃತಿಯ ಭಾಗವೇ ಆಗಿರುವುದರಿಂದ ಸದಾಶಯ, ಸಾಹಿತ್ಯಿಕ, ಸೃಜನಶೀಲ ಸಂಯೋಜನೆಗಳ ಸಿನಿಮಾ ಹಾಡುಗಳನ್ನು ಆರಿಸಿ, ಆಧರಿಸಿ ಗೀತಮಾಲಿಕೆಗಳನ್ನಾಗಿಸುವುದು ನಮ್ಮ ಕರ್ತವ್ಯವೇ ಆಗಿದೆ. ಈ ನಿಟ್ಟಿನಲ್ಲಿ, ಜ್ಯೋತಿ ಅವರ ಬರಹಗಳು ಪ್ರಶಂಸನೀಯ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತ್ಯ, ಸಂಗೀತ, ಸಿನಿಮಾ ಸಿನಿಮಾ ಕಥೆ ಇವೆಲ್ಲಾ ಒಂದಕ್ಕೊಂದು ಪೂರಕವಾಗಿದೆ. ಆಧುನಿಕ ಯುಗದ ಬೆನ್ನು ಹತ್ತಿ ದಿನಚರಿಯಲ್ಲಿ ಕಳೆದು ಹೋಗುವ ಯುವ ಜನ ತಮ್ಮ ವಿಸ್ಮೃತಿಯನ್ನು ಸರಿಸಿ, ಇಂಥ ಒಳ್ಳೆಯ ಕನ್ನಡ ಚಿತ್ರಗೀತೆಗಳು ನಮ್ಮಲ್ಲಿ ಇವೆ ಎಂದು ಆಲಿಸುವ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಕರ್ಕಶ ಸಂಗೀತದ ಅಶ್ಲೀಲ ಸಾಹಿತ್ಯದ ಚಿತ್ರಗೀತೆಗಳು ನಮ್ಮಲ್ಲಿ ನಕಾರಾತ್ಮಕ ಭಾವವನ್ನು ಹೆಚ್ಚಿಸುತ್ತದೆ ಎಂಬುದಾಗಿ ಖುದ್ದು ಲೇಖಕಿ ಈ ಕೃತಿಯಲ್ಲಿ ಬರೆದುಕೊಂಡಿದ್ದಾರೆ.
©2025 Book Brahma Private Limited.