ಪತ್ರಕರ್ತ ಶಶಿಧರ ಚಿತ್ರದುರ್ಗ ಅವರು ಪತ್ರಿಕೆಯಲ್ಲಿ ಬರೆಯಲು ಸಾಧ್ಯವಾಗದ ಚಿತ್ರರಂಗ ಕುರಿತ ಟಿಪ್ಪಣಿಗಳನ್ನು ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸುತ್ತಿದ್ದರು. ಆಗ ಶುರುವಾಗಿದ್ದೇ ’ಚಿತ್ರ-ಕಥೆ’ ಅಂಕಣ. ಹಿರಿಯ ಸಿನಿಮಾ ಛಾಯಗ್ರಾಹಕರಾದ ಭವಾನಿ ಲಕ್ಷ್ಮೀನಾರಾಯಣ ಮತ್ತು ಪ್ರಗತಿ ಅಶ್ವತ್ ನಾರಾಯಣ ಅವರು ಸೆರೆಹಿಡಿದಿರುವ ಅಪರೂಪದ ಹಳೆಯ ಫೋಟೋಗಳು ಚಿತ್ರರಂಗದ ಕಥೆ ಹೇಳುತ್ತದೆ. ಕುವೆಂಪು ಒಪ್ಪಿಗೆ ಪತ್ರ, ಬಾಲಣ್ಣನ ಹಸ್ತಾಕ್ಷರ, ಫೈಟರ್ ಶಿವಯ್ಯ, ಸಿನಿಮಾ ನೋಡಲು ಬಂದ ಮಾಸ್ತಿ ಹೀಗೆ ಹಲವು ಪ್ರಮುಖ ಸಂಗತಿಗಳ ಕುರಿತು ಲೇಖಕರು ಈ ಕೃತಿಯಲ್ಲಿ ಮಾಹಿತಿ ಒದಗಿಸಿದ್ದಾರೆ.
ನಟ-ನಟಿಯರ ಮನಮುಟ್ಟುವ ಹಾವಭಾವಗಳು ರೂಪುಗೊಳ್ಳಲು ಬೇಕಿರುವ, ಅಭಿನಯಕ್ಕೆ ತೆರೆಯ ಹಿಂದಿದ್ದು ಬಣ್ಣ ತುಂಬಿದ, ಬದುಕುಗಳ ಚಿತ್ರ-ಚಿತ್ರಣವೆ ಈ ಚಿತ್ರಕಥೆ. ಹೆಸರೇ ಹೇಳುವಂತೆ ಚಲನಚಿತ್ರಗಳಿಗಾಗಿ ತೆರೆಯ ಹಿಂದೆ ದುಡಿದ ಜೀವಗಳ ಬೆವರಿನ ಪ್ರತಿಫಲನ. ಕಲಾವಿದರು ಹಾಗೂ ತಂತ್ರಜ್ಞರ ಅಪರೂಪದ ಶೂಟಿಂಗ್ ಸೆಟ್ ಹಾಗೂ ಖಾಸಗೀ ಫೋಟೋಗಳು, ಕೈಬರಹದ ಪತ್ರಗಳು, ಸಂದ ಗೌರವಗಳು, ಹಿಂದಿನ ಕಾಲದ ಚಿತ್ರಗಳ, ನಟ-ನಟಿಯರ ಕಷ್ಟಗಳು, ವಿಶೇಷ ಸಂಗತಿಗಳು, ಹಲವಾರು ಮೊದಲುಗಳಿಗೆ ಸಾಕ್ಷಿಯಾದ ಸಿನಿಮಾಗಳ ಪರಿಚಯ, ಇಂತಹ ಹಲವು ಕುತೂಹಲಗಳನ್ನು ಒಳಗೊಂಡ ಪುಸ್ತಕವಿದು. ಪ್ರತೀ ಚಿತ್ರಗಳನ್ನು ಕಣ್ತುಂಬಿಕೊಳ್ಳುವಾಗ ವಿಸ್ಮಯ ಎನಿಸುತ್ತದೆ. ಮನರಂಜನೆಗಾಗಿ ಸಿನಿಮಾ ರಂಗವನ್ನು ನೆಚ್ಚಿಕೊಂಡ ಪ್ರತೀ ಜೀವಕ್ಕೂ ಆಪ್ತವಾಗಬಲ್ಲ ಪುಸ್ತಕವೆಂದರೆ ತಪ್ಪಾಗಲಾರದು. ತೆರೆ ಹಿಂದಿನ ಶ್ರಮಿಕರನ್ನು ಪರಿಚಯಿಸುವ ಜವಾಬ್ದಾರಿಯನ್ನು ಬರಹಗಾರ, ಪತ್ರಕರ್ತ ಶಶಿಧರ ಚಿತ್ರದುರ್ಗ ನಿಭಾಯಿಸಿದ್ದಾರೆ.
©2024 Book Brahma Private Limited.