‘ಹೆಜ್ಜೆಗುರುತು’ 580 ಪುಟಗಳ ಹೊತ್ತಗೆ. ಮೂಕಿ ಕಾಲದಿಂದ ಆರಂಭಗೊಂಡು ಚಿತ್ರರಂಗದ ಬೆಳವಣಿಗೆಯ ವಿವಿಧ ಮಜಲುಗಳಿಗೆ ಸಂಬಂಧಿಸಿದ ಚಲನಚಿತ್ರಗಳು, ವ್ಯಕ್ತಿಗಳು ಹಾಗೂ ಘಟನಾವಳಿಗಳನ್ನು ಹೆಣೆಯುತ್ತಾ ಕನ್ನಡ ಚಿತ್ರರಂಗದ ಔನತ್ಯವನ್ನು ದಾಖಲಿಸುವ ಪ್ರಯತ್ನ ಇಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಾಕಷ್ಟು ಕೊಡುಗೆಯನ್ನು ನೀಡುವುದರೊಂದಿಗೆ ಹೊಸ ಪೀಳಿಗೆಯನ್ನು ಬೆಳೆಸಿದ್ದರಿಂದಾಗಿ, ಚಿತ್ರೋದ್ಯಮ ನಿಂತ ನೀರಾಗದೆ ವಿಕಸನಗೊಳ್ಳಲು ಸಾಧ್ಯವಾಯಿತು. ಕನ್ನಡ ಚಿತ್ರರಂಗ ನೆಲೆಯೂರಲು ಭದ್ರಬುನಾದಿ ಹಾಕಿದ ಮಹನೀಯರ ಜೊತೆ ಜೊತೆಯೇ ಮತ್ತಷ್ಟು ಹೊಸ ಪ್ರತಿಭೆಗಳು ಕೂಡಿಕೊಂಡದ್ದು ಚಿತ್ರರಂಗ ಪ್ರವೃದ್ಧಮಾನಕ್ಕೆ ಬರಲು ಸಾಧ್ಯವಾಯಿತು. ಈ ಕೃತಿಯಲ್ಲಿ ಆರಂಭದ ಎರಡು ದಶಕಗಳಲ್ಲಿ ಬಿಡುಗಡೆಗೊಂಡ ಕನ್ನಡ ಚಿತ್ರಗಳನ್ನು ಪರಿಚಯ ಮಾಡಿಕೊಡುತ್ತಾ ತನ್ಮೂಲಕ ಚಿತ್ರರಂಗಕ್ಕೆ ಸಿಕ್ಕ ಕೊಡುಗೆಯನ್ನು ದಾಖಲಿಸಲು ಪ್ರಯತ್ನಿಸಲಾಗಿದೆ. ಕ್ರಮೇಣ ಒಂದು ಹಂತ ತಲುಪಿ, ಭದ್ರನೆಲೆಗಟ್ಟಿನ ಮೇಲೆ ನಿಂತ ಕಾರಣದಿಂದ ಕನ್ನಡ ಚಿತ್ರರಂಗ ಹೊಸ ಹೊಸ ಆವಿಷ್ಕಾರಗಳತ್ತ ತನ್ನನ್ನು ತಾನು ತೆರೆದುಕೊಳ್ಳಲಾರಂಭಿಸಿತು. ಮೂಕಿಚಿತ್ರಗಳು, ಮಾತನಾಡುವ ಚಿತ್ರಗಳು, ಹೊಸ ಹೊಸ ತಂತ್ರಜ್ಞಾನ ಬಳಕೆ, ವಲಸೆಯ ಅನಿವಾರ್ಯತೆಯಲ್ಲಿದ್ದ ಕನ್ನಡ ಚಿತ್ರರಂಗ ನಿಧಾನವಾಗಿ ರಾಜ್ಯಕ್ಕೆ ಬಂದು ನಿಂತ ಪ್ರಕ್ರಿಯೆ, ವರ್ಣ ಚಿತ್ರಗಳು, ಹೊಸ ಅಲೆ ಚಿತ್ರಗಳವರೆಗೂ ಬಿಡುಗಡೆಗೊಂಡ ಚಿತ್ರಗಳು ಹಾಗೂ ಆ ಮೂಲಕ ಚಿತ್ರರಂಗಕ್ಕೆ ಬಂದು ನಿಂತ ಬಗ್ಗೆ ಇಲ್ಲಿ ಉಲ್ಲೇಖವಿದೆ. ನಂತರವೂ ಕನ್ನಡ ಚಿತ್ರರಂಗ ನಿಂತ ನೀರಾಗದೆ ನಿತ್ಯವಾಹಿನಿಯಾಗಿ, ಜೀವ ತರಂಗಿಣಿಯಾಗಿ ಪ್ರವಹಿಸುತ್ತಲೇ ಇದೆ. ಆ ಬಗ್ಗೆ ಸಹ ಸ್ಥೂಲ ಮಾಹಿತಿ ಇದೆ.
©2024 Book Brahma Private Limited.