‘ಕನ್ನಡ ಚಿತ್ರರಂಗ ಒಂದು ವಿವೇಚನೆ’ ಲೇಖಕ ಎನ್. ಎಸ್. ಶ್ರೀಧರಮೂರ್ತಿ ಅವರ ಕೃತಿ. ಕನ್ನಡ ಚಿತ್ರರಂಗಕ್ಕೆ ತನ್ನದೆ ಆದ ಇತಿಹಾಸವಿದೆ. ಭಾರತದ ಇತರೆ ಭಾಷೆಗಳ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದ ವ್ಯಾಪ್ತಿ ಮತ್ತು ಇತಿಹಾಸ ಚಿಕ್ಕದೆನಿಸಿದರೂ ಅದು ಇತ್ತೀಚಿನ ದಿನಗಳಲ್ಲಿ ಸಾಧಿಸಿರುವ ಸಾಧನೆ ಕಡಿಮೆಯದೇನಲ್ಲ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಸಾಧಾರಣ ಪ್ರತಿಭೆ ತೋರಿದ ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಚಿತ್ರಸಾಹಿತಿಗಳು ಆಗಿಹೋಗಿದ್ದಾರೆ. ಅವರೆಲ್ಲರ ಸಾಧನೆಗಳನ್ನು ಮೆಲುಕು ಹಾಕುವುದು ಮತ್ತು ಇಂದಿನ ಹಾಗೂ ಮುಂದಿನ ದಿನಗಳ ಚಿತ್ರರಂಗದ ದಿಕ್ಕುದೆಸೆಗಾಗಿ ಅವರ ಸಾಧನೆಗಳನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವುದು ಇಂದಿನ ತುರ್ತಾಗಿದೆ. ಕನ್ನಡ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ. ಅಂತಹ ಹಲವು ವಿಚಾರಗಳನ್ನು, ಚಿಂತನೆಗಳನ್ನು, ಚಿಂತನೆಗಳನ್ನು ಇಲ್ಲಿ ಲೇಖಕರು ವಿಶದವಾಗಿ ಚರ್ಚೆಗೆ ಒಳಪಡಿಸಿದ್ದಾರೆ. ಇಲ್ಲಿ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾದ ವಿಚಾರಗಳಿಲ್ಲ. ಅವುಗಳಿಗೆ ಪೂರಕವಾದ ಚಿತ್ರಮಂದಿರಗಳ ಸಮಸ್ಯೆ, ಚಿತ್ರರಂಗ ಮತ್ತು ಕಾನೂನು, ಸಿನಿಮಾ ಪತ್ರಿಕೆಗಳು ಮುಂತಾದ ವಿಷಯಗಳ ಬಗ್ಗೆಯೂ ಲೇಖಕರು ಬಹಳಷ್ಟು ಒಳನೋಟಗಳನ್ನು ಒದಗಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಇದೊಂದು ಉಪಯುಕ್ತ ಗ್ರಂಥವಾಗಿದೆ.
©2024 Book Brahma Private Limited.