‘ನಾಟಕ ಮತ್ತು ಸಿನೆಮಾ’ ಕೃತಿಯು ಕೆ.ವಿ ಸುಬ್ಬಣ್ಣ ಅವರ ನಾಟಕ ಮತ್ತು ಸಿನೆಮಾ ಆಧಾರಿತ ಕೃತಿಯಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಮ್ಮಲ್ಲಿ ಸಾಹಿತ್ಯ ನಾಟಕದ ಬಗ್ಗೆ ಬೆಳೆದಿರುವ ತಿಳಿವು ರಂಗ ನಾಟಕದ ಬಗ್ಗೆ ಬೆಳೆದಿಲ್ಲವೇನೋ ಎಂದು ನನಗೆ ಸಂದೇಹ. ನಮ್ಮಲ್ಲಿ ರಂಗನಾಟಕ ಅಷ್ಟು ಪ್ರಬುದ್ಧವಾಗಿ ಬೆಳೆದಿರುವುದೂ ಅಪರೂಪವೇ, ಚಲನ ಚಿತ್ರವಂತೂ ಬಹಳ ಈಚಿನದು. ನೆನ್ನೆ ಮೊನ್ನೆ ಹುಟ್ಟಿಕೊಂಡಿದ್ದು, ಬೇರೆ ದೇಶಗಳಲ್ಲಿ ಬೆಳೆದ ಹಾಗೆ ಅದು ನಮ್ಮಲ್ಲಿ ಬೆಳೆದೂ ಇಲ್ಲ. ಅದರ ಬಗ್ಗೆ ನಮ್ಮ ತಿಳಿವು ತೀರಾ ಕಡಿಮೆ. ಇವುಗಳನ್ನೆಲ್ಲ ಗಣನೆಯಲ್ಲಿಟ್ಟುಕೊಂಡು ರಂಗಭೂಮಿ - ಚಲನಚಿತ್ರ (ನಾಟಕ-ಸಿನಿಮಾ) ಇವುಗಳ ಸ್ವರೂಪ ಮೂಲತಃ ಯಾವ ತರಹದ್ದು ಅನ್ನುವುದರ ಪರಿಶೀಲನೆಗೆ ನನ್ನ ಲೇಖನವನ್ನು ಮಿತಿಗೊಳಿಸಿಕೊಂಡಿದ್ದೇನೆ. ಸಾಮಾನ್ಯವಾಗಿ, ನಮ್ಮ ದೇಶದ ಸಿನೆಮಾಗಳನ್ನು ನೋಡಿದರೆ ಅವು ಒಂದು ರೀತಿಯಲ್ಲಿ ನಾಟಕದ ಹಾಗೆ ಕಾಣುತ್ತವೆ. ಸ್ವಲ್ಪ ಯೋಚಿಸುವಂಥವರಿಗೆ ಸಿನೆಮಾ ನಾಟಕಕ್ಕಿಂತ ತುಂಬ ಭಿನ್ನವೆನ್ನುವುದು ಗೊತ್ತು. ನಾಟಕ ಜೀವಂತ ಪ್ರದರ್ಶನ ; ಆದರೆ ಸಿನಿಮಾ ನೆರಳಿನ ಆಟ ನಾಟಕದಲ್ಲಿರುವ ಕಾಲ ದೇಶ ಕ್ರಿಯೆಗಳ ನಿರ್ಬಂಧ ಸಿನೆಮಾಕ್ಕಿಲ್ಲ : ಅದಕ್ಕಿಂತ ಇದು ಎಷ್ಟೋ ಸ್ವತಂತ್ರ. ನಾಟಕ 'ಘನ' ವೆನ್ನಿಸುವಂತಿದ್ದರೆ, ಸಿನೆಮಾ `ದ್ರವ' ವೆನ್ನಿಸುವ ಹಾಗಾಗಿರುತ್ತದೆ. ಅಲ್ಲಿ ಕಾಣಿಸಲಿಕ್ಕಾಗದೆ ಇರುವಂಥ ಎಷ್ಟೋ ವಾಸ್ತವಗಳನ್ನು ಇಲ್ಲಿ ಸುಲಭವಾಗಿ ತೋರಿಸಬಹುದು. ಈ ಮೇಲಿನ ಮಾತುಗಳೆಲ್ಲ ಸ್ಪಷ್ಟವಾಗಿ ಹೊಳೆಯುವಂಥವು. ಆದರೆ, ಇಷ್ಟಾದರೂ, ಸಿನಿಮಾ ನಾಟಕಕ್ಕಿಂತ ಭಿನ್ನವಾದ ಮಾಧ್ಯಮದಿಂದಲೇ ಹುಟ್ಟಿಕೊಳ್ಳುತ್ತದೆ ಎನ್ನುವುದು ದೃಢವಾಗುವುದಿಲ್ಲ. ನಾಟಕವನ್ನು ಸೆಲುಲಾಯ್ಡ್ ನಲ್ಲಿ 'ದ್ರವ'ಗೊಳಿಸಿ, ಡಬ್ಬಿ ತುಂಬಿಟ್ಟದ್ದೇ ಸಿನಿಮಾ ಎನ್ನುವ ಭಾವನೆ ಸಾಮಾನ್ಯವಾಗಿ ನಮ್ಮಲ್ಲಿ ಉಳಿದೇ ಬಿಡುವುದುಂಟು. ಇದು ನಿಜವಾಗಿ ಬರೀ ನಮ್ಮ ದೇಶದ ಮಾತೇ ಅಲ್ಲ. ಸಿನೆಮಾದ ಇತಿಹಾಸ ಉದ್ದಕ್ಕೂ ರಂಗಭೂಮಿ ಈ ಹಸುಳೆ-ಕಲೆಯನ್ನು ಬೆನ್ನು ಹತ್ತಿ ಕಾಡಿದೆ. ರಂಗಭೂಮಿಯ ಉಡಪಿಡತದಿಂದ ಪಾರಾಗುವ ಹೆಣಗಾಟದಲ್ಲೇ ಸಿನೆಮಾ ತನ್ನ ಸ್ವತಂತ್ರ ಅಸ್ತಿತ್ವದ ಬಹಳಷ್ಟು ಸಾಧಿಸಿಕೊಂಡಿದೆ. ನಾಟಕ-ಸಿನೆಮಾ ಇವು, ಸ್ವರೂಪದಲ್ಲಿ ಒಂದು ಎಂಬ ಭಾವನೆ ಏಕೆ ಬಂತು? ಅದೇ ಭಾವನೆ ಈಗಲೂ ಏಕೆ ಉಳಿದಿದೆ? ಇದಕ್ಕೆ ಸಿನೆಮಾದ ಇತಿಹಾಸದ ಮೇಲೆ ಕೊಂಚ ಕಣ್ಣು ಹಾಯಿಸಿ ನೋಡುವುದು ಒಳ್ಳೆಯದು ಎಂದು ವಿಶ್ಲೇಷಿತವಾಗಿದೆ.
©2025 Book Brahma Private Limited.