ಲೇಖಕ ಶ್ರೀಧರ ಮೂರ್ತಿ ಅವರು ಜಾಗತಿಕ, ರಾಷ್ಟಮಟ್ಟ, ರಾಜ್ಯಮಟ್ಟ, ಸಾಹಿತ್ಯ ಸಮ್ಮೇಳನ, ಆರು ವಿಶ್ವವಿದ್ಯಾಲಯಗಳಲ್ಲಿ ಹಾಗೂ ಹಲವು ಸಂಕಿರಣಗಳಲ್ಲಿ ಸಿನಿಮಾ ಕುರಿತು ಮಂಡಿಸಿರುವ ಪ್ರಬಂಧಗಳ ಸಂಕಲನ ‘ಸಿನಿಮಾ ಎನ್ನುವ ನಾಳೆ’. ಸಿನಿಮಾದಲ್ಲಿನ ಅಂತರಂಗದ ಭಾಷೆಯನ್ನು ಗ್ರಹಿಸುವ ಇಲ್ಲಿನ ಲೇಖನಗಳು ಸಿನಿಮಾ ಪರಿಭಾಷೆಯನ್ನು ನಮಗೆ ಪರಿಚಯಿಸುತ್ತದೆ.
ಕೃತಿಗೆ ಬೆನ್ನುಡಿ ಮಾತುಗಳನ್ನಾಡಿರುವ ಯು. ಆರ್. ಅನಂತಮೂರ್ತಿ ಅವರು “‘ಸಿನಿಮಾ ಜಾಗತಿಕ ಭಾಷೆ ಎಂದು ಹೇಳುವ ಉತ್ಸಾಹದಲ್ಲಿ ನಾವು ಅದು ಅಂತರಂಗದ ಭಾಷೆ ಕೂಡ ಹೌದು ಎನ್ನುವ ವಾಸ್ತವವನ್ನು ಮರೆಯುತ್ತಿದ್ದೇವೆ' ಎಂದು ನೀನು ಹೇಳಿದ ಮಾತು ಯೋಚಿಸುವಂತೆ ಮಾಡಿತು. 'ಭಾರತೀಯಸಿನಿಮಾ' ಎನ್ನುವುದು ಹೇಗೆ 'ವಿಶ್ವಸಿನಿಮಾ'ದಿಂದ ಭಿನ್ನವೋ ಹಾಗೆ 'ಕನ್ನಡಸಿನಿಮಾ' ಎನ್ನುವುದೂ ಕೂಡ 'ಭಾರತೀಯ ಸಿನಿಮಾ'ದಿಂದ ಪ್ರತ್ಯೇಕವಾಗಿದೆ. ಆದರೆ ಇದನ್ನು ಸಮೀಕರಣ ರೂಪದಲ್ಲಿ ಪ್ರತ್ಯೇಕಿಸುವುದು ಕಷ್ಟ. ಹೀಗಾಗಿ ಬುದ್ಧಿಲೋಕ ಮತ್ತು ಭಾವಲೋಕಗಳ ನಡುವೆ ಗೋಡೆಯೊಂದನ್ನು ಕಟ್ಟಿಕೊಂಡು ಒಂದರಿಂದ ಇನ್ನೊಂದನ್ನು ಪುಷ್ಟಿಪಡಿಸಿಕೊಳ್ಳದೆ ಸಿನಿಮಾಕ್ಕೆ ಸೈದ್ಧಾಂತಿಕ ಚೌಕಟ್ಟನ್ನು ಕಟ್ಟುವ ಹಲವು ವಿಫಲ ಯತ್ನಗಳು ನಮ್ಮಲ್ಲಿ ನಡೆಯುತ್ತಿವೆ. ಈ ನಡುವೆ ಸಾಂಸ್ಕೃತಿಕ ನೆಲೆಯ ಮೂಲಕ ಸಿನಿಮಾವನ್ನು ಹಿಡಿದಿಡಲು ನೀನು ಮಾಡುತ್ತಿರುವ ಪ್ರಯತ್ನಗಳು ನನ್ನ ಕುತೂಹಲವನ್ನು ಹೆಚ್ಚಿಸಿವೆ. ಈ ಪ್ರಯತ್ನದಲ್ಲಿ ನೀನು ಎದುರಿಸುತ್ತಿರುವ ತೊಡಕುಗಳು ಇಂತಹ ಇನ್ನಷ್ಟು ಬರವಣಿಗೆಯನ್ನು ಮಾಡಿದಾಗ ತಾನಾಗಿಯೇ ಸಡಿಲಗೊಳ್ಳಲಿವೆ” ಎಂದಿದ್ಧಾರೆ.
©2024 Book Brahma Private Limited.