ಲೇಖಕ ಮಹೇಶ್ ದೇವಶೆಟ್ಟಿ ಅವರ ಕೃತಿ-MAKING OF ಬಂಗಾರದ ಮನುಷ್ಯ.ಶಿಕ್ಷಣ ಪೂರೈಸಿಯೂ ಹಳ್ಳಿಗೆ ಬಂದು ಬೇಸಾಯ ಕೈಗೊಂಡು, ಅಕ್ದಕನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದು ಮಾತ್ರವಲ್ಲ; ಇಡೀ ಹಳ್ಳಿಯವರೊಂದಿಗೆ ಪರೋಪಕಾರಿಯಂತಿದ್ದು, ಸಾಮರಸ್ಯದ ಜೀವನಕ್ಕೆ ಮಾದರಿ ಪಾತ್ರದ (ರಾಜೀವಪ್ಪ) ಚಿತ್ರಣವನ್ನು ಹೊಂದಿದ ಹಾಗೂ ಡಾ. ರಾಜಕುಮಾರ ನಟಿಸಿದ ಕೌಟುಂಬಿಕ ಚಿತ್ರವಿದು.
ಚಲನಚಿತ್ರ ನಟ ಡಾ. ಶಿವರಾಜಕುಮಾರ ಅವರು ಕೃತಿಗೆ ಬೆನ್ನುಡಿ ಬರೆದು ‘ಮಹಾ ತ್ಯಾಗಕ್ಕೆ ಮತ್ತೊಂದು ಹೆಸರೇ ‘ಬಂಗಾರದ ಮನುಷ್ಯ’. ಅಪ್ಪಾಜಿಯ 92 ಹಟ್ಟುಹಬ್ಬದಂದು ಕೃತಿ ಪ್ರಕಟವಾಗುತ್ತಿದೆ. ಲೇಖಕ ಮಹೇಶ್ ದೇವಶೆಟ್ಟಿ ಅವರು ಸುಂದರವಾಗಿ ನಿರೂಪಿಸಿದ್ದಾರೆ. ನಲವತ್ತೆರಡು ವರ್ಷದ ಹಿಂದಿನ ಸಿನಿಮಾದ ಮೇಕಿಂಗ್ ಕುರಿತು ಅದ್ಭುತ ಮಾಹಿತಿ ಸಂಗ್ರಹಿಸಿ ಪುಸ್ತಕ ರಚಿಸಿದ್ದಾರೆ. ಇದು ನನಗಷ್ಟೇ ಅಲ್ಲ; ಇಡೀ ಕನ್ನಡ ನಾಡಿಗೇ ಹೆಮ್ಮೆ ಮತ್ತು ಸಂಭ್ರಮದ ವಿಷಯ’ ಎಂದು ಪ್ರಶಂಸಿಸಿದ್ದಾರೆ.
ಕೃತಿಯಲ್ಲಿ ಬಂಗಾರದ ಜೀವಕ್ಕೆ ಅಕ್ಷರ ಅಭಿಷೇಕ, ಶಿಷ್ಯನ ಕೃತಿಗೆ ಗುರುವಿನ ಹಾರೈಕೆ, ಗೆಳೆಯನ ಬರಹದ ಕುರಿತು ಒಂದಿಷ್ಟು, ಒಬ್ಬ ಬಂಗಾರದ ಮನುಷ್ಯನ ಕಥನ, ಹೊಕ್ಕಳು ಹುರಿ ಕತ್ತರಿಸುತ್ತಾ, ಋಣ ಸಂದಾಯದ ಖಜಾನೆ ತೆರೆದಾಗ ಹೀಗೆ ಲೇಖಕರ ಗೆಳೆಯರು, ಹಿತೈಷಿಗಳ ಅಭಿಪ್ರಾಯವಿದ್ದರೆ, ನಂತರದ ಪುಟಗಳಲ್ಲಿ ಅಂದರೆ ಇದು ನಾಲ್ಕು ಐದು ವಾರದ ಚಿತ್ರ, ಬಂಗಾರದ ಮನುಷ್ಯ ಸಿನಿಮಾನೇ ಆಗ್ತಿರಲಿಲ್ಲ, ರಾಜ್ ಗೆ 45, ಭಾರತಿಗೆ 35 ಸಾವಿರ ರೂ. ಸಂಭಾವನೆ, ರಾಜೀವಪ್ಪನ ಪಾತ್ರಕ್ಕೆ ಜೀವ ತುಂಬಲು ರಾಜ್ ರೆಡಿ, ಸಿದ್ಧಲಿಂಗಯ್ಯ ಸಹಿತಿ 4 ಜನರು ಸಾಯುತ್ತಿದ್ದರು, ಕೋಳಿ ಸ್ವರ್ಗಾರೋಹಣ ಸಂಘ ಕಟ್ಟಿದ್ದರು ರಾಜ್, ದೊಡ್ಡ ಬಂಡೆ ರಾಜ್ ತಲೆಮೇಲಿಂದ ಹಾರಿತು, ರಾಜ್ ಏಂಬ ದೀಪ ಆರದಂತೆ ಇವರು ಕಾಯುತ್ತಿದ್ದರು, ಕ್ಲೈಮ್ಯಾಕ್ಸ್ ಚೇಂಜ್ ಮಾಡಬೇಕು, ನಿರ್ಮಾಪಕರ ಕಣ್ಣಲ್ಲಿ ಮತ್ತೆ ಪೂರ್ಣಚಂದ್ರ, ಐದನೇ ದಿನಕ್ಕೆ ಶುರುವಾದ ಹಬ್ಬ ಎರಡು ವರ್ಷಕ್ಕೆ ನಿಂತಿತಲ್ಲ, ಬಂಗಾರದ ಮನುಷ್ಯನನ್ನು ಕಿತ್ತು ಹಾಕಿದರಲ್ಲ, ದಕ್ಷಿಣ ಭಾರತ ಚಿತ್ರರಂಗಗಳೇ ಬೆವರಿ ಬೆಂಡಾದವಲ್ಲ, ಬಂಗಾರದ ಮನುಷ್ಯ ತಾರಾಗಣ-ತಂತ್ರಜ್ಞರು ಹೀಗೆ ವಿವಿಧ ಅಧ್ಯಾಯಗಳಡಿ ಬಂಗಾರದ ಮನುಷ್ಯ ಚಲನಚಿತ್ರ ರೂಪುಗೊಂಡ ಬಗೆ, ಸಾಗಿದ ಹಾದಿಯನ್ನು ಕಟ್ಟಿಕೊಡಲಾಗಿದೆ.
©2024 Book Brahma Private Limited.