ಲೇಖಕ ಡಾ. ಪ್ರದೀಪ ಕೆಂಚನೂರು ಅವರ ಕೃತಿ ’ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ . ಕನ್ನಡ ಸಿನಿಮಾ ಕುರಿತ ಅಧ್ಯಯನ ಕೃತಿಯಾಗಿದೆ. ‘ಇಲ್ಲಿ ಎತ್ತುವ ಪ್ರಶ್ನೆಗಳು ತೀರಾ ಸಾಪೇಕ್ಷವಾದವುಗಳು. ಅತ್ಯಂತ ವ್ಯಕ್ತಿಗತ ನೇರ ತಿರುವುಗಳಿಂದ ಅವುಗಳು ಬಂದಿವೆಯಾದರೂ ಕೂಡ ಒಂದು ಮಾದರಿಯ ಓದು ಮತ್ತು ಅನುಭವಗಳು ಅವುಗಳನ್ನು ರೂಪಿಸಿವೆ. ಅವುಗಳಿಗೆ ಪಡೆದುಕೊಳ್ಳಲೆತ್ನಿಸಿದ ಉತ್ತರಗಳೂ ಕೂಡ ಸಾಪೇಕ್ಷವಾದವುಗಳಾಗಿವೆ. ಅವುಗಳು ಒಂದು ಶ್ರೇಷ್ಟ ಸಾಧನೆಯ ವಾಕ್ ಕಲ್ಪನೆಗಳು ಅಥವಾ ಹೈಪೋಥಿಸಿಸ್ ಗಳು ಒಳ್ಳೆಯ ದರ್ಜೆಯ ಅನುಮಾನಗಳು, ಆದರೆ, ಅವುಗಳೇ ಅಂತಿಮವಲ್ಲ. ಅವುಗಳು ಮುಂದಿನ ಹಂತದ ಸಂವಾದ ಮತ್ತು ಚರ್ಚೆಗೆ ಇಂಬು ಕೊಡುತ್ತದೆ. ಇಂತಹ ಅನುಮಾನಗಳು ಇಲ್ಲಿ ಸರಣಿ ಪ್ರಶ್ನೆಗಳಿಗೂ ಕಾರಣವಾಗುತ್ತವೆ. ಈ ಅಧ್ಯಯನ ಕನ್ನಡದಲ್ಲಿ ಈಗಾಗಲೇ ಇರುವ ಜ್ಞಾನವನ್ನು ಕೂಡ ಪ್ರಶ್ನಿಸುತ್ತದೆ. ಅದೇ ಹೊತ್ತಿಗೆ, ಏಕಕಾಲದಲ್ಲಿ ಲೇಖಕರ ಅಧ್ಯಯನ ಉಂಟುಮಾಡಿದ ಜ್ಞಾನವನ್ನೂ ಪ್ರಶ್ನಿಸುವಂತೆ ಪ್ರೇರೇಪಿಸುತ್ತದೆ. ಕನ್ನಡ ಚಲನಚಿತ್ರ ಮೀಮಾಂಸೆಯನ್ನು ಕನ್ನಡ ಸಿನಿಮಾ ಅಧ್ಯಯನದ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೆ ಸಿದ್ದಾಂತವೆಂಬುದಿದೆಯೇ? ಎಂಬ ಪ್ರಶ್ನೆ ಬಹಳ ಗಂಭೀರವಾಗಿ ಅಧ್ಯಾಯನಕಾರರನನ್ನು ಕಾಡುತ್ತದೆ. ಇದು ಕನ್ನಡ ಸಿನಿಮಾ ಎಂಬುದಿದೆಯೇ ಎಂಬ ಪ್ರಶ್ನೆಯ ರೀತಿಯಲ್ಲಿಯೇ ಒದಗುತ್ತದೆ. ಇನ್ನೂ ಮುಂದುವರಿಸಿ, ನಾವಿದನ್ನು ಭಾರತೀಯ ಸಿನಿಮಾವೆಂಬುದಿದೆಯೇ? ಅಥವಾ ಭಾರತೀಯ ಚಿಂತನಾ ಕ್ರಮದ ಮಾದರಿಯ ಸಿನಿಮಾವೊಂದಿದೆಯೇ? ಎಂಬ ಪ್ರಶ್ನೆಯವರೆಗೂ ವಿಸ್ತರಿಸಬಹುದಾಗಿದೆ ’ ಎಂಬ ಲೇಖಕರ ಚಿಂತನೆಗಳು ಈ ಕೃತಿಯಲ್ಲಿ ಒಳಗೊಂಡಿವೆ.
©2024 Book Brahma Private Limited.