ಲೇಖಕ ಎನ್. ಎಸ್. ಶ್ರೀಧರಮೂರ್ತಿ ಅವರ `ಬೆಳ್ಳಿತೆರೆಯಲ್ಲಿ ಭಾರತೀಯ ಸೇನೆ’ ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಭಿನ್ನ ಪ್ರಯತ್ನದ ಕೃತಿ. ಈ ಕೃತಿಯಲ್ಲಿ ಅಧ್ಯಯನವಿರುವುದು ಭಾರತೀಯ ಚಿತ್ರರಂಗದಲ್ಲಿ ಬೆಳ್ಳಿತೆರೆ ಕುರಿತು ಎಷ್ಟು ಸಿನಿಮಾಗಳು ಬಂದಿವೆ ಎನ್ನುವುದರ ಕುರಿತಲ್ಲ. ಭಾರತೀಯ ಸೇನೆಯನ್ನು ಬೆಳ್ಳಿತೆರೆ ಹೇಗೆ ತೋರಿಸಿದೆ ಎನ್ನುವುದರ ಕುರಿತು. ಏಕೆಂದರೆ ಇಂದು ಜನ ಸಾಮಾನ್ಯರಲ್ಲಿ ಸೇನೆಯ ಕುರಿತು ಇರುವ ಚಿತ್ರಣಗಳೆಲ್ಲವೂ ಸಿನಿಮಾಗಳಿಂದಲೇ ಬಂದಿದ್ದು. ರಾಷ್ಟ್ರೀಯತೆಗಿಂತ ಆತ್ಮ ನಿರ್ಣಯದ ಹಕ್ಕು ಮುಖ್ಯ ಎಂಬ ತಾತ್ವಿಕತೆಯಲ್ಲಿ ಮೂಡಿ ಬಂದ ಚಿತ್ರಗಳಲ್ಲಿ ಪ್ರಭುತ್ವ ವಿರೋಧಿ ಎನ್ನುವ ನೆಲೆಯಲ್ಲಿ ಉಗ್ರವಾದ, ಭಯೋತ್ಪಾದನೆ, ಕೋಮುವಾದ, ಭೂಗತ ಜಗತ್ತಿನ ವೈಭವೀಕರಣ ನಡೆಯುತ್ತಿದೆ. ಅಲ್ಲಿ ಭಾರತೀಯ ಸೇನೆಯನ್ನೇ ಕಳ್ಳರ ಸ್ಥಾನದಲ್ಲಿ ನಿಲ್ಲಿಸಿರುವ ಚಿತ್ರಣಗಳೂ ಬಂದಿವೆ. ಇದರ ಅಪಾಯವನ್ನು ನಾವು ಗುರುತಿಸದೇ ಹೋದರೆ ಭಾರತೀಯ ಸೇನೆಯ ಆತ್ಮ ಶಕ್ತಿಯನ್ನು ಉಡುಗಿಸುವ ಕೆಲಸ ನಮ್ಮಿಂದಲೇ ಸಂಭವಿಸುತ್ತದೆ. ಇಂತಹ ಮಾತುಗಳನ್ನು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಬೆಳ್ಳಿತೆರೆಯಲ್ಲಿ ಕಾಣಿಸಿ ಕೊಂಡ ಬಗೆಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡಿರುವುದು. ಇದನ್ನು ಯುದ್ಧಗಳು ಸಂಭವಿಸಿದ ಚಾರಿತ್ರಿಕ ಘಟ್ಟಕ್ಕೆ ತಕ್ಕಂತೆ ವಿಂಗಡಿಸಲಾಗಿದೆ. ಅದರ ಜೊತೆಗೆ, ಆಗಿನ ಚಾರಿತ್ರಿಕ ಸಂದರ್ಭಗಳನ್ನು ನೀಡಲಾಗಿದೆ. ವಾಸ್ತವ ಮತ್ತು ಅಭಿವ್ಯಕ್ತಿಗೆ ಇರುವ ಅಂತರವನ್ನು ತೋರಿಸುವುದು ಇದರ ಉದ್ದೇಶ. ಸೇನೆಯನ್ನು ಸಡಿಲ ನೆಲೆಯಲ್ಲಿ ವಸ್ತುವಾಗಿರಿಸಿ ಕೊಂಡ ಚಿತ್ರಗಳನ್ನೂ ತಾತ್ವಿಕ ನೆಲೆಗಟ್ಟಿನಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಿ, ಕನ್ನಡ ಚಿತ್ರರಂಗ ನಾನಾ ಕಾರಣಗಳಿಂದ ಸೇನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅಂತಹ ಕಾರಣಗಳನ್ನು ಕೊನೆಯಲ್ಲಿ ವಿಶ್ಲೇಷಿಸಲಾಗಿದೆ ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.