ವಿಕ್ರಮಾರ್ಜುನ ವಿಜಯ’ ಎಂದು ಕರೆಯಲಾಗುವ ಆದಿಕವಿ ಪಂಪನ ಮಹಾಭಾರತದ ವ್ಯಾಖ್ಯಾನವನ್ನು ಹಿರಿಯ ವಿದ್ವಾಂಸ ಡಿ.ಎಲ್. ನರಸಿಂಹಾಚಾರ್ ಅವರು ಮಾಡಿದ್ದಾರೆ. ಪ್ರಸ್ತಾವನೆಯಲ್ಲಿ ಡಿ.ಎಲ್.ಎನ್ ಹೀಗೆ ಬರೆದಿದ್ದಾರೆ-
ಪಂಪ ಭಾರತ ಕಾವ್ಯವನ್ನು ಅಭ್ಯಾಸ ಮಾಡುವ ಪ್ರೌಢ ವಿದ್ಯಾರ್ಥಿಗಳಿಗೂ ಇತರರಿಗೂ ಈ ಟೀಕೆಯಿಂದ ಸಾಕಷ್ಟು ಸಹಾಯವಾಗುವುದೆಂದು ನಾನು ನಂಬಿದ್ದೇನೆ. ಸಾಕಷ್ಟು ವಿಸ್ತಾರವಾಗಿ ಪ್ರತಿಪದಾರ್ಥ ಸಹಿತವಾಗಿ ಈ ಟೀಕೆ ರಚಿತವಾಗಿದೆ. ವ್ಯಾಕರಣ, ಛಂದಸ್ಸು, ಪೂರ್ವಕಥಾವೃತ್ತಾಂತ, ಶಬ್ದಾರ್ಥ ನಿರ್ಣಯ, ಆಕರ ಗ್ರಂಥಗಳು-ಮುಂತಾದ ಅನೇಕ ವಿಷಯಗಳು ಈ ಟೀಕೆಯಲ್ಲಿ ನಿರೂಪಿತ ವಾಗಿವೆ. ಹಲವೆಡೆಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ; ನನ್ನದೇ ಸರಿಯೆಂಬ ಹಠವೇನೂ ಇಲ್ಲ. ಜಿಜ್ಞಾಸುವಿನ ದೃಷ್ಟಿಯಿಂದ ಕೆಲವಂಶಗಳನ್ನು ಚರ್ಚಿಸಿದೆ. ನನಗೆ ಸಂದೇಹವೆಂದು ತೋರಿ ದೆಡೆಗಳಲ್ಲಿ ಪ್ರಶ್ನೆ ಚಿಹ್ನೆಯನ್ನು ಧಾರಾಳವಾಗಿ ಬಳಸಿದ್ದೇನೆ. ತಿಳಿಯದ ಅಂಶಗಳಿಗೂ ಇದೇ ಚಪ್ಪ ಯನ್ನು ಅಲ್ಲಲ್ಲಿ ಹಾಕಿದೆ. ಈ ಪ್ರಶ್ನೆ ಚಿಹ್ನೆಗಳನ್ನು ತೆಗೆದುಹಾಕುವ ಕೆಲಸ ಮುಂದಿನ ವಿದ್ವಾಂಸರಿಗೆ ಸೇರಿದುದಾಗಿದೆ; ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿದು ಹೊಸ ಆಧಾರಗಳು ತಲೆದೋರು ವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಾಗಬಹುದು. ಇವನ್ನೆಲ್ಲ ಸಹಾನುಭೂತಿಯಿಂದ ನೋಡಬೇಕು ಎಂಬುದು ಅವರ ಕಳಕಳಿ.
©2024 Book Brahma Private Limited.