ವಿಶ್ವಸೃಷ್ಟಿಗೆ ಕಾರಣವಾದ ದೇವತೆಗಳ ಆರಾಧನೆಯಲ್ಲಿ ತೊಡಗಿದ ಆದಿಮಾನವರು ಮಾನಸಿಕ ನೆಮ್ಮದಿಯನ್ನು ಪಡೆಯುವ ಸಲುವಾಗಿ ವಿವಿಧ ಬಗೆಯ ದೇವತೆಗಳ ಆರಾಧನೆಯಲ್ಲಿ ತೊಡಗಿದರು. ಒಂದು ಜೀವದಿಂದ ಮತ್ತೊಂದು ಜೀವ ಸೃಷ್ಟಿಯಾಗಿ ಜಗತ್ತಿಗೆ ಕಾಲಿಡುವ ಬಗೆ ಕುತೂಹಲಕ್ಕೆ ಎಡೆಮಾಡಿತು. ಈ ಹಿನ್ನೆಲೆಯಲ್ಲಿ, ತಮ್ಮನ್ನು ಈ ಜಗತ್ತಿಗೆ ತಂದ ಮಾತೆಯನ್ನು ದೇವತೆ ಎಂದು ಆರಾಧಿಸುವ ಪದ್ಧತಿ ರೂಢಿಗೆ ಬಂದಿತು. ಮಾತೃದೇವತಾ ಆರಾಧನೆಯೊಂದಿಗೆ ತಮ್ಮ ಸೃಷ್ಟಿಗೆ ಮೂಲಕಾರಣವಾದ ಸೃಜನಾಂಗದ ಬಗೆಗೆ ಪೂಜನೀಯ ಭಾವನೆ ಬೆಳೆದು ಅದರ ಪೂಜೆಗೆ ಮೊದಲಾಯಿತು. ಸೃಷ್ಟಿ ದೇವತೆಯಾದ ಲಜ್ಜಾಗೌರಿಯನ್ನು ಸೃಜನೇಂದ್ರಿಯ ರೂಪದಲ್ಲಿ ಪೂಜಿಸಲಾಗುತ್ತಿದೆ. ಮಾನವನ ಜನನಕ್ಕೆ ಮೂಲಕಾರಣವಾದ ಸೃಜನೇಂದ್ರಿಯದ ಬಗ್ಗೆ ಪ್ರಾರಂಭದಿಂದಲೂ ಪೂಜನೀಯ ಭಾವನೆಯಿದ್ದು, ಆರಾಧನೆಗೆ ಒಳಪಟ್ಟಿತು.
ಶಿಷ್ಟ ಸಂಸ್ಕೃತಿ ಬೆಳೆದು ಬಂದಂತೆಲ್ಲ ತೋರಿಕೆಯ ರೀತಿಯಲ್ಲಿ ಸೃಜನಾಂಗದ ಆರಾಧನೆಗೆ ಸಂಕೋಚ ಭಾವನೆ ಮೂಡಿ ಸೃಜನಾಂಗದ ಪೂಜೆಯ ಪದ್ಧತಿ ಕಡಿಮೆಯಾಯಿತು. ಆದರೂ, ಶಿಷ್ಷ ದೇವತೆಗಳ ಗುಡಿಯ ಪ್ರಾಕಾರಗಳ ಮೇಲೆ ಇವುಗಳು ಕೆತ್ತಲ್ಪಟ್ಟಿರುವುದನ್ನು ನಾವು ಇಂದಿಗೂ ಕಾಣುತ್ತೇವೆ. ನಮ್ಮ ಪ್ರಾಚೀನ ಸಂಸ್ಕೃತಿಯ ಅಂಗವಾಗಿ ರೂಢಿಯಲ್ಲಿದ್ದ ಲಜ್ಜಾಗೌರಿ ಆರಾಧನೆಯ ಚಾರಿತ್ರಿಕ, ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಹಾಗೂ ಈ ಸಂಪ್ರದಾಯವು ಇನ್ನೂ ಜಾರಿಯಲ್ಲಿರುವ ಬೇರೆ ಬೇರೆ ನೆಲೆಗಳ ಶೋಧನೆ ಮಾಡಿ ’ಲಜ್ಜಾಗೌರ” ಕೃತಿಯನ್ನು ರಾಮಚಂದ್ರ ಚಿಂತಾಮಣ ಢೇರೆ ಹಾಗೂ ವಿಠಲರಾವ್ ಗಾಯಕ್ವಾಡ್ ರಚಿಸಿದ್ದಾರೆ.
©2024 Book Brahma Private Limited.