ಪಂಡಿತ- ಸಂಶೋಧಕ ಶ್ರೇಷ್ಠ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರನ್ನು ಕನ್ನಡ ಸಾಹಿತ್ಯ- ಸಂಶೋಧನೆಗೆ ಸಂಬಂಧಿಸಿದಂತೆ ಚಲಿಸುವ ವಿಶ್ವಕೋಶ ಎಂದು ಗುರುತಿಸಲಾಗುತ್ತಿತ್ತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 1906ರ ಅಕ್ಟೋಬರ್ 27ರಂದು ಜನಿಸಿದರು. ತಂದೆ ಶ್ಯಾಮಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಬಾಲ್ಯದ ವಿದ್ಯಾಭ್ಯಾಸವನ್ನು ಪಾವಗಡ, ಸಿರಾ ತುಮಕೂರುಗಳಲ್ಲಿ ಮುಗಿಸಿ 1924ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಎಂ.ಎ. ಪದವಿ (1929) ಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು.
ಮೈಸೂರು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‍ನಲ್ಲಿ ರೆಸಿಡೆಂಟ್ ಕನ್ನಡ ಪಂಡಿತ (1930) ಆಗಿ ನೇಮಕವಾದರು. ಕನ್ನಡ ಅಧ್ಯಾಪಕ (1939), ಪ್ರಾಧ್ಯಾಪಕ (1956) ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅನಂತರ ಕೆಲವು ಕಾಲ ಯುಜಿಸಿ ಅಧ್ಯಾಪಕರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಸದಸ್ಯ, ಉಪಾಧ್ಯಾಕ್ಷ, ಅಧ್ಯಕ್ಷ, ಸಂಪಾದಕರಾಗಿದ್ದ ಅವರು ಪ್ರಬುದ್ಧ ಕರ್ನಾಟಕ (1956-1962) ಪ್ರಧಾನ ಸಂಚಾಲಕರಾಗಿದ್ದರು. ಡಿಎಲ್‍ಎನ್ ಅಭಿಮಾನಿಗಳು ಉಪಾಯನ (1967) ಎಂಬ ವಿದ್ವತ್ ಗ್ರಂಥ ಅರ್ಪಿಸಿ ಸನ್ಮಾನ ಮಾಡಿದರು. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಮೈಸೂರು ವಿಶ್ವವಿದ್ಯಾನಿಲಯ ಡಿ.ಎಲ್.ಎನ್. ಅವರಿಗೆ ಗೌರವ ಡಾಕ್ಟರೇಟ್ (1960) ನೀಡಿತು. ಬೀದರಿನಲ್ಲಿ ನಡೆದ 41ನೇ ಸಾಹಿತ್ಯ ಸಮ್ಮೇಳನ (1960) ಅಧ್ಯಕ್ಷತೆ ವಹಿಸಿದ್ದರು. ಅವರು 1971ರ ಮೇ 7ರಂದು ನಿಧನರಾದರು.
ವಡ್ಡಾರಾಧನೆ, ಭೀಷ್ಮಪರ್ವ, ಪಂಪಭಾರತ ದೀಪಿಕೆ, ಶಬ್ದಮಣಿ ದರ್ಪಣಂ, ಸಿದ್ಧರಾಮ ಚಾರಿತ್ರ ಸಂಗ್ರಹ, ಸುಕುಮಾರ ಚರಿತಂ, ಕನ್ನಡ ಗ್ರಂಥಸಂಪಾದನೆ, ಪಂಪರಾಮಾಯಣ ಸಂಗ್ರಹ, ಗೋವಿನ ಹಾಡು, ಇತ್ಯಾದಿ ಇವರ ಕೃತಿಗಳು. ಪೀಠಿಕೆಗಳು ಮತ್ತು ಲೇಖನಗಳು ಅವರ ಸಂಶೋಧನ ಬರಹಗಳ ಸಂಕಲನವಾಗಿದೆ.