‘ಪಂಪ ಭಾರತ ಪ್ರಸಂಗ’ ಸಿ.ಪಿ ನಾಗರಾಜ ಅವರ ಕೃತಿಯಾಗಿದೆ. ಪಂಪ ಕವಿಯ ವಿಕ್ರಮಾರ್ಜುನ ವಿಜಯ ಎಂಬ ಕೃತಿಯಲ್ಲಿ ಬರುವ ಕೆಲವು ಪ್ರಸಂಗಗಳನ್ನು ಸಿ.ಪಿ.ನಾಗರಾಜ ಅವರು ಆಯ್ದುಕೊಂಡು, ಓದುಗರು ಓದಲು ನೆರವಾಗುವಂತೆ ಬರೆದಿದ್ದಾರೆ. ಇವೆಲ್ಲ ಪ್ರಸಂಗಗಳು ಕೃತಿಯ ಪಾತ್ರಗಳ ನಡುವೆ ನಡೆಯುವ ಮಾತುಕತೆಗಳು, ಹಾಗಾಗಿ ಒಂದು ಬಗೆಯ ನಾಟಕೀಯ ಎನಿಸುವ ನೆಲೆಯಲ್ಲಿ ಇವೆ.
ಪಂಪನ ಈ ಕೃತಿಯು ಕನ್ನಡದ ಕಥನ ಪರಂಪರೆಯ ಚಹರೆಗಳನ್ನು ರೂಪಿಸಿಕೊಟ್ಟದೆ. ಆ ಮೊದಲು ಸಂಸ್ಕೃತ ನುಡಿಯಲ್ಲಿ ಇದ್ದ ಮಹಾಕಾವ್ಯಗಳ ಕಥನ ವಿಧಾನವು ಶ್ರವ್ಯಮಾನತೆಯನ್ನು ತನ್ನ ಚಹರೆಯನ್ನಾಗಿ ಇರಿಸಿಕೊಂಡಿತ್ತು. ಅಂದರೆ ಕಥನಗಳು ಕೇಳುವಿಕೆಯನ್ನು ಅವಲಂಬಿಸಿ ರೂಪುಗೊಂಡಿದ್ದವು. ಓದುವವರು ಓದಿ ಹೇಳುವಾಗ, ಕೇಳುವವರಿಗೆ ಕಾವ್ಯಗಳು ತಲುಪುತ್ತಿದ್ದವು.
ಕನ್ನಡದಲ್ಲಿ ಕಥನ ಪರಂಪರೆಯನ್ನು ಕಟ್ಟುವಾಗ ಪಂಪ ಶ್ರವ್ಯಮಾನತೆಯೊಡನೆ ದೃಶ್ಯಮಾನತೆಯನ್ನು ಸೇರ್ಪಡೆಗೊಲಿಸಿದ್ದಾನೆ. ಅಂದರೆ ಕಿವಿಗೆ ತಲುಪುವ ಜೊತೆಗೆ, ಕಣ್ಣಿಗೆ ಕಟ್ಟುವ ಹಾಗೆಯೂ ಇರಬೇಕು ಎಂಬುದೇ ಈ ಚಹರೆಯ ನೆಲೆಯಾಗಿದೆ. ಈ ಕೃತಿಯು ಹೊಸ ತಲೆಮಾರಿನ ಓದುಗರಿಗೆ ಪಂಪನನ್ನು ಹೆಚ್ಚು ಹತ್ತಿರಕ್ಕೆ ಒಯ್ಯಲು ನೆರವಾಗುತ್ತದೆ .
©2025 Book Brahma Private Limited.