ಬಾರ್ಕೂರು ಉದಯ ಅವರ ಹೊಸ ಸಂಶೋಧನಾ ಕೃತಿಯಾಗಿದೆ ಇದು. ತುಳು ಸಂಸ್ಕೃತಿ ಚರಿತ್ರೆ ಕಥನದ ನಿರೂಪಣೆಯನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಕರಾವಳಿ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಧಾರ್ಮಿಕ ಪರಂಪರೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ತುಳು ಇತಿಹಾಸವೆನ್ನುವುದು ನೆಲಮೂಲವಾದದ್ದು. ಇಂದು ಆ ಇತಿಹಾಸವನ್ನು ತಿರುಚಿ, ಅಲ್ಲಿ ಅನ್ಯವಾದುದನ್ನು ತುರುಕಿಸಿ ಅದನ್ನೇ ಇತಿಹಾಸ, ಪರಂಪರೆ ಎಂದು ಬಿಂಬಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ, ತುಳು ಮೂಲವನ್ನು ಹುಡುಕುತ್ತಾ ಹೋಗುವ ಈ ಕೃತಿಯಾಗಿದೆ ಇದು. ಇಲ್ಲಿ ಇತಿಹಾಸ ಕಥನ, ಸ್ಥಳೀಯ ಆಡಳಿತ, ಬಾರ್ಕೂರಿನ ಇತಿಹಾಸ, ಅಬ್ಬಕ್ಕ ರಾಣಿ ಕಾಲದ ರಾಜಕೀಯ ಹಾಗೂ ಸಾಮಾಜಿಕ ಪರಿಸರ, ಹೊನ್ನ ಕಂಬಳಿ ಅರಸರು, ದೈವಾರಾಧನೆಯ ಪ್ರತೀಕವಾಗಿ ಕಚೂರ ಮಾಲ್ಲಿ ಮತ್ತು ಕೋಟೆದ ಬಬ್ಬು ಮೊದಲಾದುವುಗಳಲ್ಲದೆ ಆಧುನಿಕ ಜಗತ್ತಿಗೆ ತುಳುನಾಡನ್ನು ತೆರೆದುಕೊಟ್ಟ ಸಮಾಜ ಸುಧಾರಕ ಕುದ್ಮಲ್ ರಂಗರಾವ್‌ನ್ನೂ ಇಲ್ಲಿ ಪರಿಚಯಿಸಲಾಗಿದೆ. ಕಾರಂತರ ಚೋಮನ ದುಡಿಯನ್ನು ಮುಂದಿಟ್ಟುಕೊಂಡು ಆಧುನಿಕೋತ್ತರವಾದ ಧ್ವನಿಗಳನ್ನು ಲೇಖಕರು ಚರ್ಚಿಸಿದ್ದಾರೆ. ಇಲ್ಲಿ ಒಟ್ಟು 11 ಅಧ್ಯಾಯಗಳಿವೆ. ಮೊದಲ ಮತ್ತು ಕೊನೆಯ ಲೇಖನಗಳು ಇತಿಹಾಸ ರಚನಾ ಪರಂಪರೆಯ ಕುರಿತು ವ್ಯಾಖ್ಯಾನಗಳಾಗಿವೆ. ತುಳುನಾಡಿನ ಇತಿಹಾಸ ಹೇಳುವ ಸತ್ಯಗಳು, ತುಳುನಾಡಿನಲ್ಲಿ ಬೇರು ಬಿಟ್ಟ ಗೋಚರ, ಅಗೋಚರ ಗುಲಾಮಗಿರಿ ಪದ್ಧತಿ, ಇಲ್ಲಿನ ಪ್ರತಿಭಟನೆ, ಬಂಡಾಯ ಇತ್ಯಾದಿ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.